ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ರಾತ್ರಿ ಗಗನ ಕೌತುಕವೊಂದು ಕಂಡು ಬಂತು. ಸುಮಾರು 7.15ರ ಸುಮಾರಿಗೆ ದೇವಳದ ರಥಬೀದಿಯಿಂದ ಕಂಡಾಗ ಆಕಾಶವು ಕೆಂಬಣ್ಣಕ್ಕೆ ತಿರುಗಿದಂತೆ ಕಂಡು ಬಂತು. ಆಕಾಶದಲ್ಲಿ ಹದವಾದ ಮಿಂಚು ಮತ್ತು ದೂರದಲ್ಲಿ ಗುಡುಗಿನ ಸದ್ದು ಕೇಳುತ್ತಿತ್ತು. ಜನರು ಆಗಸ ಕೆಂಪಾಗಿದೆ ಎಂದು ಕುತೂಹಲದಿಂದ ನೋಡತೊಡಗಿದರು. ಕೆಲವರು ಈ ಕೌತುಕವನ್ನು ತಮ್ಮ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡರು. ಆಗಸ ಕೆಂಪು ಬಣ್ಣದಿಂದ ಕಂಗೊಳಿಸುತ್ತಿದ್ದ ಈ ಗಗನ ಕೌತುಕವನ್ನು ಪತ್ರಕರ್ತ ಶಿವ ಭಟ್ ಕಾಂಚನ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ್ದರು.
ಇದರ ನೈಜ ಕಾರಣದ ಬಗ್ಗೆ ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಗಗನದಲ್ಲಿ ಆಗುವ ಬದಲಾವಣೆಯಿಂದ ಈ ರೀತಿ ಆಗಿರಬಹುದು ಎಂದು ಈ ವಿಶೇಷ ನೋಡಿ ಕ್ಷೇತ್ರಕ್ಕೆ ಬಂದಿದ್ದ ಭಕ್ತರೊಬ್ಬರು ತಮ್ಮ ಸಂಬಂಧಿಗಳೊಂದಿಗೆ ಹೇಳುತ್ತಿದ್ದುದು ಕೇಳಿ ಬಂತು. ಆರಂಭದಲ್ಲಿ ಕಡುಕೆಂಪು ಇದ್ದ ಆಗಸವು ಬರಬರುತ್ತಾ ನಸು ಕೆಂಪಾಗುತ್ತಾ ಸ್ವಲ್ಪ ಸಮಯದ ಬಳಿಕ ಎಂದಿನಂತಾಯಿತು. ಆದರೆ ಮಂಗಳವಾರ ಕುಕ್ಕೆಯಲ್ಲಿ ಮಳೆಯಾಗಿಲ್ಲ.