ಜಿಲ್ಲೆ

ಅಪ್ರಾಪ್ತ ವಯಸ್ಕಳ ಮೇಲೆ ಸಾಮೂಹಿಕ ದೌರ್ಜನ್ಯ ಎಸಗಿದ ದುರುಳರು; ಮೂವರು ಅರೆಸ್ಟ್

ಮಂಡ್ಯ: ಅಪ್ರಾಪ್ತ ವಯಸ್ಕಳ ಮೇಲೆ ಮೂವರು ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಂಡ್ಯ ಜಿಲ್ಲೆಯು ಮದ್ದೂರು ತಾಲ್ಲೂಕಿನಲ್ಲಿ ನಡೆದಿದೆ. ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆತಂದು ಸಹಪಾಠಿಗಳೇ ಕೃತ್ಯ ಎಸಗಿರುವುದು ತನಿಖೆ ವೇಳೆ ಹೊರಬಂದಿದೆ.

ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮದ್ದೂರು ಮೂಲದ ಪುನೀತ್​, ಮಂಜುನಾಥ್​, ಸಿದ್ದರಾಜು ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮೈಸೂರು ಯುವ ದಸರಾದಲ್ಲಿ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ ಪುನೀತ್​ ಆಕೆಯ ಜತೆ ಸಲುಗೆ ಬೆಳೆಸಿಕೊಂಡಿದ್ದ. ಬಳಿಕ ನವೆಂಬರ್​ 04ರಂದು ಸಂತ್ರಸ್ತೆಯನ್ನು ಪುಸಲಾಯಿಸಿ ಲಾಡ್ಜ್​ ಒಂದಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿ ಬಳಿಕ ತನ್ನ ಸ್ನೇಹಿತರ ಜತೆಗೂಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದ.

ಕೃತ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದು ಸಂತ್ರಸ್ತೆಗೆ ಕಳುಹಿಸಿ ಕರೆದಾಗಲೆಲ್ಲಾ ಬರಬೇಕು ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡುವುದಾಗಿ ಬ್ಲ್ಯಾಕ್​ಮೇಲ್​ ಮಾಡಿದ್ದರು. ಇದರಿಂದ ಭಯಗೊಂಡ ಸಂತ್ರಸ್ತೆ ನಡೆದ ಬಗ್ಗೆ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಪೋಷಕರ ದೂರಿನನ್ವಯ ಆತ್ಯಾಚಾರ, ಪೋಕ್ಸೋ, ಆಟ್ರಾಸಿಟಿ ಸೆಕ್ಷನ್ ಅಡಿ‌ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.