ಜಿಲ್ಲೆ

ರಾಜ್ಯದ ಆನ್‌ಲೈನ್ ಶಿಕ್ಷಣ ನೀತಿ ಸೋಮವಾರ ಪ್ರಕಟ

ಬಳ್ಳಾರಿ: ಮಕ್ಕಳ ಆರೋಗ್ಯ ಗಮನದಲ್ಲಿರಿಸಿಕೊಂಡು ಜೂ. 8ರಂದು ರಾಜ್ಯದ ಆನ್‌ಲೈನ್ ಶಿಕ್ಷಣ ನೀತಿಯನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ತಿಳಿಸಿದ್ದಾರೆ.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳ ಆರಂಭಕ್ಕೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಪೂರ್ವ ಪ್ರಾಥಮಿಕ ಶಾಲೆಗಳ ಅರಂಭಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಇಲಾಖೆ ಪರಿಗಣನೆಯಲ್ಲಿದೆ. ಆನ್‌ಲೈನ್ ಶಿಕ್ಷಣದ ಪರಿಣಾಮಗಳ ಪರಾಮರ್ಶೆ ನಡೆದಿದೆ. ಪೂರ್ವ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಒಪ್ಪಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ, ಆತ್ಮವಿಶ್ವಾಸ ಹೆಚ್ಚಿಸಲು ಗಮನ ನೀಡಲಾಗಿದೆ. ಪ್ರತಿ ವಿದ್ಯಾರ್ಥಿ ಹಾಗೂ ಡೆಸ್ಕಿನ ನಡುವೆ ತಲಾ 3.5 ಅಡಿ ಅಂತರ ಇರಲಿದೆ. ಕೋಣೆಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಿದೆ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆ ಉಚಿತ ಮಾಸ್ಕ್ ನೀಡಲಿದೆ. ಅನೇಕ ಸಂಸ್ಥೆಗಳೂ ಮಾಸ್ಕ್ ನೀಡಲು ಮುಂದಾಗಿವೆ. ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿಗೆ ಪ್ರತಿನಿತ್ಯ ಆರೋಗ್ಯ ತಪಾಸಣೆ ನಡೆಸಿ, ಸ್ಯಾನಿಟೈಸರ್ ನೀಡಲಾಗುವುದು. ಅನಾರೋಗ್ಯದ ಲಕ್ಷಣವಿದ್ದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಪಾಲಕರು ಕೇಂದ್ರದೊಳಗೆ ಬಂದು ಗುಂಪುಗೂಡಬಾರದು ಎಂದು ಮನವಿ ಮಾಡಿದರು.

ಕೇಂದ್ರಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಇರುತ್ತಾದರೂ ಮನೆಯಿಂದ ತರುವುದು ಸೂಕ್ತ. ಕೇಂದ್ರಕ್ಕೆ ತೆರಳಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಜೂ. 10ರಿಂದ 20ರ ವರೆಗೆ ಚಂದನ ವಾಹಿನಿಯಲ್ಲಿ ಪುನರ್ಮನನ ಕಾರ್ಯಕ್ರಮ ಇರಲಿದೆ. ಜುಲೈ ಇಲ್ಲವೇ ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ಬರಲಿದೆ. ಈ ಬಾರಿಯೂ ಪೂರಕ ಪರೀಕ್ಷೆ ಇರಲಿದೆ ಎಂದರು.

ಶಿಕ್ಷಕರ ನೇಮಕ ಆದೇಶ: ಶಿಕ್ಷಕರ ಸಮಸ್ಯೆಗಳಿಗಾಗಿ ಸಹಾಯವಾಣಿ ಆರಂಭಿಸಲಾಗುವುದು. ಈ ಮೂಲಕ ಶಿಕ್ಷಕರು ಬಿಇಒ, ಡಿಡಿಪಿಐ ಕಚೇರಿಗಳ ಅಲೆದಾಟ ತಪ್ಪಿಸಲಾಗುವುದು. ಖಾಸಗಿ ಶಾಲೆಗಳಿಗೆ ಆರ್‌ಟಿಇ ಬಾಕಿ 275 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದನ್ನು ಶಿಕ್ಷಕರಿಗೆ ವೇತನ ನೀಡಿದರೆ ಸೂಕ್ತ. ಆರ್ಥಿಕ ಪರಿಸ್ಥಿತಿ ಗಮನಿಸಿ ಬಾಕಿ ಹಣ ನೀಡಲಾಗುವುದು. ಪಿಯುಸಿ ಉಪನ್ಯಾಸಕರ ನೇಮಕ ಸಂಬಂಧ ದಾಖಲೆಗಳ ಪರಿಶೀಲನೆ ನಡೆದಿದೆ. ಬಳಿಕ ಕೌನ್ಸೆಲಿಂಗ್ ನಡೆಸಿ ನೇಮಕ ಆದೇಶ ಪತ್ರ ನೀಡಲಾಗುವುದು ಎಂದು ಸುರೇಶ ಕುಮಾರ್ ತಿಳಿಸಿದರು.

ಸನ್ಮಾನ ಬೇಡ ಎಂದರು!: ನಗರದ ಪ್ರವಾಸಿ ಮಂದಿರ ಹಾಗೂ ಡಿಸಿ ಕಚೇರಿಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರು ಸಚಿವ ಸುರೇಶ ಕುಮಾರ್‌ರನ್ನು ಸನ್ಮಾನಿಸಿಸಲು ಮುಂದಾದರು. ಕರೊನಾ ಮುಂಜಾಗ್ರತಾ ಕ್ರಮವಾಗಿ ಇದನ್ನೆಲ್ಲ ನಯವಾಗಿಯೇ ಸಚಿವರು ತಿರಸ್ಕರಿಸಿದರು.