ಜಿಲ್ಲೆ

ರಾಜೀನಾಮೆ ಕೊಟ್ಟೇ ಬಿಟ್ರಾ ಸಚಿವ ಆನಂದ ಸಿಂಗ್​!; ಬೊಮ್ಮಾಯಿ ಸಂಪುಟದಲ್ಲಿ ಮೊದಲ ವಿಕೆಟ್ ಪತನ?

Webdesk - Ravikanth

ವಿಜಯನಗರ: ಹೊಸದಾಗಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ ಸಚಿವ ಸಂಪುಟವನ್ನೂ ವಿಸ್ತರಿಸಿ ತಕ್ಕಮಟ್ಟಿಗೆ ಸಂತೋಷದಲ್ಲಿರುವ ಬಸವರಾಜ ಬೊಮ್ಮಾಯಿ ಅವರ 'ಆನಂದ'ಕ್ಕೇ ಈಗ ಸಿಂಗ್ ಕುತ್ತು ತಂದಿರುವಂತಿದೆ. ಏಕೆಂದರೆ ಸಚಿವ ಆನಂದ ಸಿಂಗ್ ಈಗ ಬೊಮ್ಮಾಯಿ ಅವರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ ಎನ್ನಲಾಗಿದೆ.

ಸಚಿವ ಆನಂದ ಸಿಂಗ್ ತಮಗೆ ಸಿಕ್ಕಿರುವ ಖಾತೆ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡುವ ಕುರಿತು ಸಿಎಂಗೆ ಸಂದೇಶ ರವಾನೆ ಮಾಡಿದ್ದಾರೆ. ಖಾತೆ ಹಂಚಿಕೆಯಾಗಿ ಹಲವು ದಿನ ಕಳೆದರೂ ಇನ್ನೂ ಅಧಿಕಾರ ಸ್ವೀಕರಿಸದೆ ಒತ್ತಡ ಹೇರುತ್ತಿರುವ ಆನಂದ್ ಸಿಂಗ್, ಇನ್ನೆರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಈಗಾಗಲೇ ರಾಜೀನಾಮೆಯನ್ನು ನೀಡಲಾಗಿದೆ ಎಂಬ ಮಾಹಿತಿಯೂ ಇದೆ.

ಇನ್ನು ಅವರ ತವರು ಕ್ಷೇತ್ರದಲ್ಲಿ ಇದನ್ನು ಪುಷ್ಟೀಕರಿಸುವಂಥ ಬೆಳವಣಿಗೆಗಳು ಗೋಚರಿಸಿವೆ. ಹೊಸಪೇಟೆಯಲ್ಲಿ ಕಳೆದ 14 ವರ್ಷಗಳಿಂದ ಚಾಲ್ತಿಯಲ್ಲಿದ್ದ ಶಾಸಕರ ಕಚೇರಿಯ ಬೋರ್ಡ್ ತೆರವುಗೊಳಿಸಲಾಗಿದ್ದು, ಸಂಪೂರ್ಣವಾಗಿ ಕಚೇರಿ ಬಂದ್ ಮಾಡುವ ಪ್ರಯತ್ನಗಳು ನಡೆಯುತ್ತಿರುವುದು ಕಂಡುಬಂದಿವೆ.

ಮತ್ತೊಂದೆಡೆ ಸಚಿವ ಆನಂದ ಸಿಂಗ್ ಈ ಕುರಿತು ಯಾವುದೇ ಗುಟ್ಟು ಬಿಟ್ಟುಕೊಡದಿರುವುದರಿಂದ ಅವರ ನಡೆ ನಿಗೂಢವಾಗಿದೆ. ಹೊಸಪೇಟೆಯ ವೇಣುಗೋಪಾಲ ದೇವಾಲಯದಲ್ಲಿ ಇರುವ ಸಚಿವ ಆನಂದ ಸಿಂಗ್, ರಾಜೀನಾಮೆ ಕುರಿತು ನಾನೇನೂ ಮಾತನಾಡುವುದಿಲ್ಲ ಎಂದಿದ್ದು, ತಮ್ಮ ಕಚೇರಿಯ ಫಲಕ ತೆರವುಗೊಳಿಸಿರುವ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಚಿವ ಸ್ಥಾನದ ಕುರಿತು ಚರ್ಚಿಸುವ ಸಲುವಾಗಿ 2 ದಿನಗಳಿಂದ ಸಿಎಂ ಅವರ ಕಾಲಾವಕಾಶ ಕೋರಿದ್ದರೂ ಯಾವುದೇ ಸ್ಪಂದನೆ ಕೂಡ ಸಿಗದ್ದರಿಂದ ಆನಂದ ಸಿಂಗ್​ ಅದನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಇಷ್ಟೆಲ್ಲ ಬೆಳವಣಿಗೆಗಳು ನಡೆದಿವೆ ಎನ್ನಲಾಗಿದೆ.