ಜಿಲ್ಲೆ

ಮೈಕ್ರೋ ಫೈನಾನ್ಸ್ ಹಾವಳಿ; ಸಾಲ‌ ವಸೂಲಿಗೆ ಬಲವಂತ ಮಾಡೋದು, ಕಿರುಕುಳ ನೀಡಿದ್ರೆ ಅರೆಸ್ಟ್: ಐಜಿಪಿ ರವಿಕಾಂತೇಗೌಡ | Micro finance

ಮೋಹನ್​ ಶೆಟ್ಟಿ

ಚಿತ್ರದುರ್ಗ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮೈಕ್ರೋ ಫೈನಾನ್ಸ್ (Micro Finance) ಸಿಬ್ಬಂದಿಗಳ ಹಾವಳಿ ಹೆಚ್ಚಾಗುತ್ತಿದ್ದು, ಸಾಲದ ಸುಳಿಗೆ ಸಿಲುಕಿರುವ ಅನೇಕ ಗ್ರಾಮೀಣ ಭಾಗದ ಜನರು ಸಾಲಗಾರರ ಕಾಟಕ್ಕೆ ಬೇಸತ್ತು, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿಗಳ ಹಾವಳಿ ತಾರಕಕ್ಕೇರಿದ್ದು, ಸಾಲ‌ ವಸೂಲಿಗೆ ಬಲವಂತ ಮಾಡುತ್ತಿರುವುದು ಸದ್ಯ ಬಡವರ ಕಣ್ಣೀರಿಗೆ, ಸಾವಿಗೆ ಕಾರಣವಾಗುತ್ತಿದೆ.

ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ ಬೇಸತ್ತ ಜನರು ಊರನ್ನೇ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಸದ್ಯ ರಾಜ್ಯ ಪೊಲೀಸರನ್ನು ಹೈ-ಅಲರ್ಟ್​ ಆಗುವಂತೆ ಮಾಡಿದೆ. ಈ ಕುರಿತು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ದಾವಣಗೆರೆ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ, ಬಲವಂತವಾಗಿ ಸಾಲ ವಸೂಲಿ ಮಾಡುವುದು, ಕಿರುಕುಳ ನೀಡಿದರೆ ಅಂಥವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಂದು ಚಿತ್ರದುರ್ಗ ಡಿಪಿಒಗೆ ಭೇಟಿ ನೀಡಿ, ಅಧಿಕಾರಿಗಳ ಸಭೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕಾಂತೇಗೌಡ, "ಸಾಲ ವಸೂಲಿಗೆ ರೌಡಿಗಳನ್ನು ಬಳಸಿಕೊಳ್ಳುವುದು, ರೌಡಿ ಶೀಟರ್ಸ್​ನಲ್ಲಿದ್ದವರು ಪೊಲೀಸರ ನಿಗಾದಲ್ಲಿ ಇರುತ್ತಾರೆ. ಆದರೆ ಬಡ್ಡಿಂಗ್ಸ್ ರೌಡಿಗಳು ಸಾಲ ವಸೂಲಿಯಲ್ಲಿದ್ದಾರೆ. ಯಾರೇ ಆಗಲಿ ಹಣದ ಆಸೆಗೆ ಕಂಪನಿಗಳ‌ ಪರವಾಗಿ ಬಲವಂತದ ಸಾಲ‌ ವಸೂಲಿಗೆ ಕಠಿಣ ಕ್ರಮ, ಗಡಿಪಾರು ಖಚಿತ" ಎಂದರು.

"ಇಂಥವರ ತೊಂದರೆಗೆ ಸಿಲುಕುವ ನಾಗರಿಕರು ತಕ್ಷಣವೇ 112 ಹಾಗೂ ತಮ್ಮನ್ನು ಸೇರಿದಂತೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ದೂರು ನೀಡಿಯೂ ಕ್ರಮ ತೆಗೆದುಕೊಳ್ಳದಿರುವ ಪೊಲೀಸರ ವಿರುದ್ದವೂ ಕಠಿಣ ಕ್ರಮ ಜರುಗಿಸಲಾಗುವುದು" ಎಂದು ಹೇಳಿದ್ದಾರೆ.