ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ವೈಯಕ್ತಿಕ ಪ್ರತಿಷ್ಠೆ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವಿನ ಶೀತಲ ಸಮರ ಬುಧವಾರ ನಡೆದ ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಬಹಿರಂಗಗೊಂಡು ಅಪಹಾಸ್ಯಕ್ಕೊಳಗಾಯಿತು.
ಪುರಸಭೆ ಸಾಮಾನ್ಯ ಸಭೆ ಪ್ರತೀ ತಿಂಗಳಾಂತ್ಯಕ್ಕೆ ಬೆಳಗ್ಗಿನ ವೇಳೆ ನಡೆಯುತ್ತಿದ್ದು, ಬುಧವಾರ ಸಭೆಯನ್ನು ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಲಾಗಿತ್ತು. 23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ 13, ಕಾಂಗ್ರೆಸ್ 7, ಎಸ್‌ಡಿಪಿಐ 2, ಜೆಡಿಎಸ್ 1 ಚುನಾಯಿತ ಮತ್ತು 5 ಮಂದಿ ನಾಮ ನಿರ್ದೇಶನಗೊಂಡ ಸದಸ್ಯರಿದ್ದಾರೆ. ಆದರೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ 8, ಜೆಡಿಎಸ್ 1, ಎಸ್‌ಡಿಪಿಐ 2 ಮತ್ತು ಸದಸ್ಯರು ಮಾತ್ರ ಭಾಗವಹಿಸಿದ್ದರು. ಉಳಿದಂತೆ ಕಾಂಗ್ರೆಸ್‌ನ ಚುನಾಯಿತ 7, ನಾಮನಿರ್ದೇಶಿತ 5, ಎಸ್‌ಡಿಪಿಐ 1 ಮತ್ತು ಬಿಜೆಪಿ 4 ಮಂದಿ ಸದಸ್ಯರು ಗೈರಾಗಿದ್ದರು. ನಿಗದಿತ ಸಮಯಕ್ಕೆ ಸಭೆಗೆ ಹಾಜರಾಗಬೇಕಿದ್ದ ಅಧ್ಯಕ್ಷ-ಉಪಾಧ್ಯಕ್ಷರೂ ಸೇರಿದಂತೆ ಕೆಲವರು ಅರ್ಧ ಗಂಟೆ ತಡವಾಗಿ ಆಗಮಿಸಿದ್ದರು. ಬಳಿಕ ಕೋರಂ ಲೆಕ್ಕಾಚಾರ ನಡೆಸಿ ಸಭೆ ಆರಂಭಿಸುತ್ತಿದ್ದಂತೆಯೇ ಎಸ್‌ಡಿಪಿಐನ ಮಹಿಳಾ ಸದಸ್ಯೆ ಸಹಿ ಹಾಕದೆಯೇ ಸಭೆಯಿಂದ ನಿರ್ಗಮಿಸಿದ್ದು, ಪುರುಷ ಸದಸ್ಯ ಸಹಿ ಹಾಕಿ ಮತ್ತೆ ಬರುವೆನೆಂದು ಹೇಳಿ ನಿರ್ಗಮಿಸಿದರು. ಉಳಿದ ಸದಸ್ಯರ ಗೈರಿಗೆ ಕಾರಣ ತಿಳಿದುಬರಲಿಲ್ಲ.
ಸದಸ್ಯರ ನಡುವೆ ವಾಗ್ವಾದ: ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಆಡಳಿತ ಪಕ್ಷದ ಸದಸ್ಯ ಶೈಲೇಶ್ ಅಮೀನ್ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಕೈಗೆತ್ತಿಕೊಳ್ಳಬೇಕಾದ ತುರ್ತು ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಅದರ ಜತೆಗೆ ಮೆಸ್ಕಾಂ, ಆರೋಗ್ಯ ಸಹಿತ ವಿವಿಧ ಇಲಾಖಾಧಿಕಾರಿಗಳು ಬಂದಿದ್ದಾರೆ. ಅವರ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಲು ಸದಸ್ಯರೇ ಬಂದಿಲ್ಲ. ಇದು ಸರಿಯೇ ಎಂದು ಪ್ರಶ್ನಿಸಿದರು.
ಮುಖ್ಯಾಧಿಕಾರಿ ನಾಗರಾಜ್ ಸಿ.ಮಾತನಾಡಿ, ಸಾಮಾನ್ಯ ಸಭೆಯಲ್ಲಿ ಸದಸ್ಯರ ಹಾಜರಾತಿ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆಯುಂಟಾಗುತ್ತಿದೆ. ಹಿಂದಿನ ಸಭೆಗಳಲ್ಲೂ ಗೊಂದಲವುಂಟಾಗಿದ್ದು ಅಧ್ಯಕ್ಷರು ಸರ್ವ ಸದಸ್ಯರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕಿದೆ ಎಂದರು. ಈ ಸಂದರ್ಭ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಮತ್ತು ಮುಖ್ಯಾಧಿಕಾರಿ ನಾಗರಾಜ್ ನಡುವೆ ವಾಗ್ವಾದ ನಡೆಯಿತು.
ಸದಸ್ಯ ಅರುಣ್ ಶೆಟ್ಟಿ ಪಾದೂರು ಮಧ್ಯಪ್ರವೇಶಿಸಿ, ಪುರಸಭೆಯ ಕೌನ್ಸಿಲ್ ಮೀಟಿಂಗ್‌ನಲ್ಲಿ ಆರೋಗ್ಯಕರವಾದ ಚರ್ಚೆ ನಡೆಯಬೇಕಿದೆ. ಜನರು ನಮ್ಮನ್ನು ಅಭಿವೃದ್ಧಿ ಪರ ಕೆಲಸ ಮಾಡುವುದಕ್ಕಾಗಿ ಆಯ್ಕೆ ಮಾಡಿದ್ದಾರೆ. ಇಲ್ಲಿ ಮಳೆಗಾಲದ ಸಿದ್ಧತೆ ಬಗ್ಗೆ ಚರ್ಚೆ ನಡೆಯಬೇಕಿದೆ. ಆದರೆ ಅದು ಆಗುತ್ತಿಲ್ಲ. ಇಲ್ಲಿ ವೈಯಕ್ತಿಕ ಪ್ರತಿಷ್ಠೆ ಮುಖ್ಯವಾಗುತ್ತಿದೆ. ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೆರಳೆಣಿಕೆ ಸದಸ್ಯರ ಉಪಸ್ಥಿತಿಯಲ್ಲಿ ಮೆಸ್ಕಾಂ, ಆರೋಗ್ಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಸರಿತಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಸಭೆ ವಿಚಾರಕ್ಕೆ ಸಂಬಂಧಿಸಿ ಒಂದು ಹಂತದಲ್ಲಿ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಮತ್ತು ಮುಖ್ಯಾಧಿಕಾರಿ ನಾಗರಾಜ ನಡುವೆ ತೀವ್ರ ವಾಗ್ವಾದ ನಡೆಯಿತು. ಸದಸ್ಯರು ವಾಗ್ವಾದ ನಡೆಸಿದಲ್ಲಿ ಕೋಳಿಜಗಳವೆನ್ನುತ್ತೀರಿ, ನಿಮ್ಮದೇನು ಕೋಳಿಜಗಳವಲ್ಲವೇ ಎಂದು ಆಡಳಿತ ಪಕ್ಷದ ಸದಸ್ಯೆ ಮೋಹಿನಿ ಶೆಟ್ಟಿ ಗೊಣಗಿದರು.