ಬೈಂದೂರು: ಕರಾವಳಿ ಪ್ರದೇಶ ವಿಭಿನ್ನ ಶೈಲಿಯ ಸಾಂಪ್ರದಾಯಿಕ ತಿಂಡಿ ತಿನಿಸು ಮತ್ತು ಆಹಾರ ಪದ್ಧತಿ ತನ್ನದೇ ಆದ ವಿಶೇಷತೆ ಹೊಂದಿದೆ. ನಮ್ಮ ಹಿರಿಯರು ತಯಾರಿಸುತ್ತಿದ್ದ ಸಾಂಪ್ರದಾಯಿಕ ಅಡುಗೆಗಳು ಋತುವಾನಕ್ಕೆ ತಕ್ಕಂತೆ ಇರುತ್ತಿತ್ತು ಮತ್ತು ಆಯಾ ಕಾಲಕ್ಕೆ ಬರುವ ಸಣ್ಣಪುಟ್ಟ ಕಾಯಿಲೆಗಳಿಗೆ ಅಡುಗೆಗಳಲ್ಲೇ ಔಷಧೀಯ ಶಕ್ತಿಯೂ ಇತ್ತು ಎಂದು ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಡಾ.ರವಿದಾಸ ಶೆಟ್ಟಿ ಹೇಳಿದರು. ಶಾಲಾ ಸಭಾಂಗಣದಲ್ಲಿ ಶನಿವಾರ ಆಟಿ ಸಂಭ್ರಮಕ್ಕೆ ಚಾಲನೆ ನೀಡಿ ವಾತನಾಡಿದರು.
ಆಟಿ ಸಂಭ್ರಮದ ಅಂಗವಾಗಿ ಆಟಿ ತಿಂಗಳಲ್ಲಿ ತಯಾರಿಸುವ ವಿವಿಧ ಖಾದ್ಯಗಳಾದ ಕೆಸುವಿನ ಪತ್ರೊಡೆ, ಸುಕ್ಕಿನುಂಡೆ, ಕಡಬು, ರವಾ ಲಡ್ಡು, ಅರಶಿನ ಎಲೆಯ ಕಡಬು, ಹಲಸಿನ ಹಣ್ಣಿನ ಕಡಬು, ಅಕ್ಕಿ ಉಂಡೆ, ಮಸಾಲೆ ಉಂಡೆ, ಕಣಿಲೆ ಗಸಿ, ಹೆಸರುಕಾಳು ಗಸಿ, ಕಾಯಿರೊಟ್ಟಿ, ಕೊಟ್ಟೆ ಇಡ್ಲಿ, ನುಗ್ಗೆಸೊಪ್ಪಿನ ಇಡ್ಲಿ ಇತ್ಯಾದಿ ತಿನಿಸುಗಳನ್ನು ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ತಯಾರಿಸಿದರು.