ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ
ಬೇಸಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರಿನ ಹಿತಮಿತ ಬಳಕೆ, ನೀರು ಪೋಲು ಆಗುವುದನ್ನು ತಪ್ಪಿಸುವುದು ಹಾಗೂ ನೀರಿನ ಶುಲ್ಕ ಪಾವತಿಸದವರ ನೀರಿನ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತ ಮಾಡುವುದು ಇತ್ಯಾದಿ ವಿಷಯಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದು ಎಂದು ಒಳಮೊಗ್ರು ಗ್ರಾ.ಪಂ. ಸಾವಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.
ವಿಷಯ ಪ್ರಾಸ್ತಾಪಿಸಿದ ಸದಸ್ಯೆ ಸುಂದರಿ, ಈಗಾಗಲೇ ಕೆಲವೊಂದು ಮನೆಗಳಲ್ಲಿ ಎರಡೆರಡು ನಳ್ಳಿ ನೀರಿನ ಸಂಪರ್ಕವಿದೆ. ಕೊಳವೆಬಾವಿ ಇದ್ದವರ ಮನೆಗೂ ನಳ್ಳಿ ನೀರಿನ ಸಂಪರ್ಕ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದರು. ಉತ್ತರಿಸಿದ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ನೀರಿನ ಸಮಿತಿ ಸಭೆ ಕರೆದು ಎಲ್ಲೆಲ್ಲಿ ಈ ರೀತಿ ಇದೆ ಎಂಬುದನ್ನು ತಿಳಿದು ಮುಂದಿನ ದಿನಗಳಲ್ಲಿ ಅಂತಹ ಸಂಪರ್ಕಗಳನ್ನು ಕಡಿತ ಮಾಡಲಾಗುವುದು ಎಂದರು. ನೀರಿನ ಶುಲ್ಕ ಪಾವತಿಸದೆ ಬಾಕಿ ಇರಿಸಿಕೊಂಡವರಿಗೆ ಈಗಾಗಲೇ ಶುಲ್ಕ ಪಾವತಿಗೆ ಸೂಚನೆ ನೀಡಿದ್ದೇವೆ. ಅತಿಹೆಚ್ಚು ಶುಲ್ಕ ಪಾವತಿಗೆ ಬಾಕಿ ಇರುವವರ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತ ಮಾಡಬೇಕಾಗುತ್ತದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ತಿಳಿಸಿದರು.
ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ ಸಲಹೆಗಳನ್ನು ನೀಡಿದರು.
ವಿವಿಧ ವಿಷಯಗಳು ಪ್ರಸ್ತಾಪ
ಪಂಚಾಯಿತಿ ವ್ಯಾಪ್ತಿಯ ದರ್ಬೆತ್ತಡ್ಕ, ಅಜ್ಜಿಕಲ್ಲು ಶಾಲೆಗಳಲ್ಲಿ ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ಕೊರತೆ ಇದ್ದು, ತುರ್ತಾಗಿ ಶಿಕ್ಷಕರ ನೇಮಕ ವಾಡುವಂತೆ ಶಿಕ್ಷಣ ಇಲಾಖೆಗೆ ಬರೆದುಕೊಳ್ಳಬೇಕು ಎಂದು ಮಹೇಶ್ ರೈ ಕೇರಿ ಆಗ್ರಹಿಸಿದರು. ಗ್ರಾಮದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಇರುವ ಬಗ್ಗೆ ವಾಹಿತಿ ನೀಡಿದ ಚಿತ್ರಾ ಬಿ.ಸಿ. ಈ ಬಗ್ಗೆ ಶಾಲಾ ಶಿಕ್ಷಕರು ಗಮನ ಹರಿಸಬೇಕೆಂದರು.
ಕುಂಬ್ರದಲ್ಲಿ ವಾರದಲ್ಲೊಂದು ದಿನ ವಾರದ ಸಂತೆ ನಡೆಯಬೇಕು. ಪಂಚಾಯಿತಿ ಹಳೆಯ ಕಟ್ಟಡದ ಆವರಣದಲ್ಲಿ ವಾರದ ಸಂತೆ ನಡೆಸುವ ಎಂದು ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ತಿಳಿಸಿದರು. ಪರ್ಪುಂಜದಿಂದ ಕುಂಬ್ರದ ತನಕ ರಸ್ತೆ ಬದಿಗಳಲ್ಲಿ ಕಸ,ಕಡ್ಡಿಗಳು ರಾಶಿ ಬಿದ್ದಿರುವ ವಿಚಾರವನ್ನು ಸಭೆಯ ಗಮನಕ್ಕೆ ತಂದ ಅಶ್ರಫ್ ಉಜಿರೋಡಿ ಹಾಗೂ ವಿನೋದ್ ಶೆಟ್ಟಿ ಮುಡಾಲ, ಸ್ವಚ್ಛತೆಗಾಗಿ ಒಬ್ಬರು ಸ್ವಚ್ಛತಾ ಪರಿಚಾರಕರನ್ನು ನೇಮಿಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವ ಸಂಟಕರಿಗೆ ಅನುಮತಿ ನೀಡುವ ಮುಂಚಿತವಾಗಿ ಸರಿಯಾದ ಕ್ರಮವಹಿಸಿ ಅನುಮತಿ ನೀಡುವುದು ಎಂದು ನಿರ್ಣಯ ಅಂಗೀಕರಿಸಲಾಯಿತು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಸಾರ್ವಜನಿಕ ಅರ್ಜಿಗಳು ಹಾಗೂ ಸರ್ಕಾರದ ಸುತ್ತೋಲೆಗಳನ್ನು ಸಭೆಯ ಮುಂದಿಟ್ಟರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸದಸ್ಯರಾದ ಲತೀಫ್ ಕುಂಬ್ರ, ಪ್ರದೀಪ್ ಸೇರ್ತಾಜೆ, ರೇಖಾ ಯತೀಶ್, ವನಿತಾ, ಶಾರದಾ ಉಪಸ್ಥಿತರಿದ್ದರು.
ಬಸ್ ಸಂಚಾರವಿಲ್ಲದೆ ತೊಂದರೆ
ಚೆಲ್ಯಡ್ಕ ಸೇತುವೆ ಮೇಲೆ ಭಾರಿ ವಾಹನ ಸಂಚಾರ ನಿಷೇಧದ ಬಳಿಕ ಈ ಭಾಗದ ಜನರ ಬೇಡಿಕೆಯಂತೆ ಪುತ್ತೂರಿನಿಂದ ದೇವಸ್ಯ ವಾರ್ಗವಾಗಿ ಗುಮ್ಮಟೆಗದ್ದೆಗೆ ಸರ್ಕಾರಿ ಬಸ್ ಬಂದು ಹೋಗುತ್ತಿತ್ತು. ಆದರೆ ಕಳೆದೊಂದು ತಿಂಗಳಿನಿಂದ ಈ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಈ ಭಾಗದ ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ವಾಣವಾಗಿದೆ ಎಂಬ ವಿಚಾರವನ್ನು ನಳಿನಾಕ್ಷಿ ಅವರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಕೆಎಸ್ಸಾರ್ಟಿಸಿ ಡಿಸಿ ಹಾಗೂ ಶಾಸಕರಿಗೆ ಮನವಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.