ಜಿಲ್ಲೆ

ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

Webdesk - Ravikanth

ಬೆಂಗಳೂರು: ಸ್ನಾನ ಮಾಡಲೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ. ಇಪ್ಪತ್ತಮೂರು ವರ್ಷ ವಯಸ್ಸಿನ ಸಂಪದ ಅಂತಿಮ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿನಿ ಆಗಿದ್ದು, ದುರಂತಕ್ಕೀಡಾಗಿದ್ದಾಳೆ. ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯ ಮನೆಯೊಂದರ ಸ್ನಾನದ ಕೋಣೆಯಲ್ಲಿ ಈ ಅವಘಡ ಸಂಭವಿಸಿದೆ.

ಕೆಲವು ದಿನಗಳ ಹಿಂದೆಯೇ ಈ ಅನಾಹುತ ಸಂಭವಿಸಿದ್ದರೂ ತಡವಾಗಿ ಬಹಿರಂಗಗೊಂಡಿದೆ. ಅಂದರೆ ಆಗಸ್ಟ್​ 4ರಂದು ಮಧ್ಯಾಹ್ನ 12.30ರ ಸುಮಾರಿಗೆ ಸಂಪದ ಸ್ನಾನಕ್ಕೆಂದು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಎರಡು ಗಂಟೆ ಕಳೆದರೂ ಆಕೆ ಸ್ನಾನದ ಕೋಣೆಯಿಂದ ಹೊರಬರದಿದ್ದಾಗ ಚಿಂತಿತರಾದ ಮನೆಯವರು ಬಾತ್​ರೂಮ್ ಬಾಗಿಲು ಮುರಿದು ಒಳಗೆ ನೋಡಿದ್ದಾರೆ. ಸ್ನಾನ ಮಾಡುತ್ತಿದ್ದ ಸಂಪದ ಕುಸಿದು ಬಿದ್ದಿದ್ದಳು.

ಎಚ್ಚರ ತಪ್ಪಿ ಕುಸಿದು ಬಿದ್ದಿದ್ದ ಸಂಪದಳನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಳು. ಸ್ನಾನದ ಸಂದರ್ಭ ಗೀಸರ್​ನಿಂದ ಕಾರ್ಬನ್​ ಮೋನಾಕ್ಸೈಡ್​ ಸೋರಿಕೆ ಆಗಿದ್ದು, ಅದರಿಂದಾಗಿ ಆಕೆ ಉಸಿರುಗಟ್ಟಿ ಸಾವಿಗೀಡಾಗಿದ್ದಾಳೆ ಎಂಬುದು ವೈದ್ಯಕೀಯ ಪರೀಕ್ಷೆ ವೇಳೆ ತಿಳಿದುಬಂದಿದೆ. ಮಹಾಲಕ್ಷ್ಮೀ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.