ಜಿಲ್ಲೆ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ: ಅರೆಬೆತ್ತಲೆ ಯುವಕ-ಯುವತಿಯರನ್ನು ಥಳಿಸಿದ ಬೆನ್ನಲ್ಲೇ ಮತ್ತೊಂದು ಘಟನೆ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ಅನ್ಯಕೋಮಿನ ಯುವಕ-ಯುವತಿ ಚಲಿಸುತ್ತಿದ್ದ ಬಸ್ ಮೇಲೆ ಹಿಂದು ಸಂಘಟನೆ ದಾಳಿ ಮಾಡಿರುವ ಆರೋಪ ಕೇಳಿಬಂದಿದೆ.

ಮಂಗಳೂರಿನ ಪಂಪ್ ವೆಲ್ ಬಳಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ. ಯುವಕ-ಯುವತಿ ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ ಹೊರಟಿದ್ದರು. ಯುವಕನಿಗೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಯುವತಿಗೂ ಥಳಿಸಿದ್ದಾರೆನ್ನಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವಾರ ವಿದ್ಯಾದಾಯಿನಿ ಸರ್ಕಲ್ ಬಳಿ ಅನ್ಯಕೋಮಿನ ಜೋಡಿ ಮೇಲೆ ದಾಳಿ ಮಾಡಲಾಗಿತ್ತು. ಕಳೆದ ಮೂರು ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ದಾಳಿಯಾಗಿರುವ ಬಗ್ಗೆ ವರದಿಯಾಗಿದೆ.

ಮಂಗಳೂರು, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ಸೇರಿದಂತೆ ವಿವಿಧ ಕಡೆ ದಾಳಿಯಾಗಿವೆ. ಕಳೆದ ಫೆಬ್ರವರಿಯ್ಲಲಿ ಎಕ್ಕಾರು ಕಲ್ಲು ಕೋರೆ ಬಳಿ ಕೂಡ ದಾಳಿ ಮಾಡಲಾಗಿತ್ತು. ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದ ಯುವಕ-ಯುವತಿಯರನ್ನು ಥಳಿಸಿ ಬಜೆಪೆ ಪೊಲೀಸರಿಗೆ ಸಂಘಟನೆ ನೀಡಿದ್ದರು. (ದಿಗ್ವಿಜಯ ನ್ಯೂಸ್​)