ಮಂಡ್ಯ: ಕರೊನಾ ಸೋಂಕು ದೃಢಪಟ್ಟರೂ ಹಲವರಿಗೆ ಆಸ್ಪತ್ರೆಗೆ ಹೋಗಲು ಭಯ. ಅಲ್ಲಿ ಏನಾದರೂ ಮಾಡಿಬಿಟ್ಟರೆ ಎಂಬ ಆತಂಕ. ಇಂಥವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯಕೀಯ ಸಿಬ್ಬಂದಿ ಪಡುವ ಪಾಡು ಅಷ್ಟಿಷ್ಟಲ್ಲ.
ಇಂಥದ್ದೇ ಒಂದು ಘಟನೆ ಮಂಡ್ಯದಲ್ಲಿ ನಡೆದಿದೆ. ಆದರೆ ಇಲ್ಲಿ ರಂಪಾಟ ಮಾಡಿರುವವರು ಜೆಡಿಎಸ್ ಮುಖಂಡ! ಇವರಿಗೆ ಕರೊನಾ ಸೋಂಕು ದೃಢಪಟ್ಟಿದ್ದರೂ ಆಸ್ಪತ್ರೆಗೆ ಬರಲು ಒಲ್ಲೆ ಎನ್ನುವ ಮೂಲಕ ಮನೆಗೆ ಬಂದ ವೈದ್ಯಕೀಯ ಸಿಬ್ಬಂದಿಯನ್ನು ಸುಸ್ತು ಮಾಡಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಇವರಿಗೆ ಸೋಂಕು ದೃಢಪಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವಂತೆ ಸಿಬ್ಬಂದಿ ಹೇಳಿದಾಗ ಅವರು, ಆರೋಗ್ಯ ಸಚಿವ ಶ್ರೀರಾಮುಲು ಅವರ ಜತೆ ನಾನು ಮಾತನಾಡಿದ್ದೇನೆ. ಆಸ್ಪತ್ರೆಗೆ ಮಾತ್ರ ಬರುವುದಿಲ್ಲ. ಮನೆಯಲ್ಲೇ ಐಸೋಲೇಷನ್ ಆಗುತ್ತೇನೆಂದು ಹಟ ಮಾಡಿರುವುದಾಗಿ ವರದಿಯಾಗಿದೆ.
ಸಾಲದು ಎಂಬುದಕ್ಕೆ ಕೆಲವು ರಾಜಕಾರಣಿಗಳಿಂದ ಅಧಿಕಾರಿಗಳಿಗೆ ಫೋನ್ ಮೂಲಕ ಒತ್ತಡ ಹಾಕಿದ್ದರು ಎನ್ನಲಾಗಿದೆ. ಟಿಎಚ್ಓ ಡಾ.ಧನಂಜಯ್ ಸೇರಿದಂತೆ ತಾಲೂಕು ಆಡಳಿತದ ಸಿಬ್ಬಂದಿ ಬಂದು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.
ನಂತರ ಒಂದು ಗಂಟೆ ಮನವೊಲಿಕೆ ಮಾಡಿದ ನಂತರ ಕೊನೆಗೂ ಒಪ್ಪಿಸಿ ಸೂಚಿಸಿದ್ದಾರೆ. ಅಲ್ಲಿಯವರೆಗೆ ಮನೆಯ ಎದುರೇ ಅಂಬ್ಯುಲೆನ್ಸ್ ನಿಲ್ಲಿಸಿಕೊಳ್ಳಲಾಗಿತ್ತು.
ಎರಡು ದಿನಗಳ ಹಿಂದೆ ಇವರ ಪುತ್ರನಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಕುಟುಂಬದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು.