ಜಿಲ್ಲೆ

VIDEO| 150 ರೂಪಾಯಿ ಆಸೆಗೆ 3 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ..!

ಬೆಂಗಳೂರು: ವ್ಯಕ್ತಿಯೊಬ್ಬ 150 ರೂಪಾಯಿ ಆಸೆಗೆ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದ ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆದಿದೆ.

ನಗರದಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಎಸಗುವ ಕೃತ್ಯ ನಡೆದಿದ್ದು, ಕೇವಲ 8 ಸೆಕೆಂಡ್​ನಲ್ಲಿ ಖದೀಮರು ಲಕ್ಷ..ಲಕ್ಷ ಹಣ ಎಗರರಿಸಿದ್ದಾರೆ. ಬ್ಯಾಂಕ್​ಗಳಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುವ ಜನರು ಈ ಬಗ್ಗೆ ಎಚ್ಚರವಹಿಸಬೇಕಿದೆ.

ಕಟ್ಟಡ ನಿರ್ಮಾಣ ಕಂಪೆನಿಯಲ್ಲಿ ಕ್ಯಾಷಿಯರ್ ಆಗಿರುವ ರಾಜಶೇಖರ್ ಹಣ ಕಳೆದುಕೊಂಡ ವ್ಯಕ್ತಿ. ಕಂಪನಿಗೆ ಹಣದ ಅವಶ್ಯಕತೆ ಹಿನ್ನೆಲೆ ಬೆಳಗ್ಗೆ ಹಣ ಡ್ರಾ ಮಾಡಿಕೊಳ್ಳಲು ರಾಜಶೇಖರ್​ ಬಂದಿದ್ದರು. ಜನತಾ ಕೋ ಆಪರೇಟಿವ್ ಬ್ಯಾಂಕ್​ನಿಂದ 3 ಲಕ್ಷ ನಗದು ಹಿಂಪಡೆದು, ಬ್ಯಾಂಕ್​ನಿಂದ ಹೊರಬಂದು, ಬೈಕ್ ಮೇಲೆ ಹಣದ ಬ್ಯಾಗ್ ಇಟ್ಟು ಜರ್ಕಿನ್ ಹಾಕಿಕೊಳ್ಳುತ್ತಿದ್ದರು.

ಈ ವೇಳೆ ಓರ್ವ ವ್ಯಕ್ತಿ ಬಂದು ನಿಮ್ಮ ಹಣ ಬಿದ್ದಿದೆ ಎಂದು ರಾಜಶೇಖರ್​ಗೆ ಹೇಳಿದ. ಹಣ ಎತ್ತಿಕೊಳ್ಳಲು ರಾಜಶೇಖರ್ ಹೋದಾಗ ಇತ್ತ ಮತ್ತೊಬ್ಬ ವ್ಯಕ್ತಿ ಬಂದು ಹಣವಿದ್ದ ಬ್ಯಾಗ್ ಅನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಬಳಿಕ ಬೈಕಿನ ಬಳಿ ಬಂದ ರಾಜಶೇಖರ್​ ಬ್ಯಾಗ್​ ಇಲ್ಲದಿರುವುದನ್ನು ನೋಡಿ ತಬ್ಬಿಬ್ಬಾದರು.

ಕೇವಲ 150 ರೂಪಾಯಿ ಆಸೆಗೆ ರಾಜಶೇಖರ್​ 3 ಲಕ್ಷ ರೂ. ಕಳೆದುಕೊಂಡಿದ್ದು, ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟೋರಿಯಸ್ ಗ್ಯಾಂಗ್ ಪತ್ತೆಗೆ ಉತ್ತರ ವಿಭಾಗ ಪೊಲೀಸರಿಂದ ವಿಶೇಷ ತಂಡಗಳ ರಚನೆಯಾಗಿದೆ. (ದಿಗ್ವಿಜಯ ನ್ಯೂಸ್​)