ಜಿಲ್ಲೆ

ಚುನಾವಣೆಯಲ್ಲಿ ಹೆಂಡ್ತಿ ಸೋತಿದ್ದಕ್ಕೆ ರೊಚ್ಚಿಗೆದ್ದ ಗಂಡ; ಮತ್ತೊಬ್ಬ ಸ್ಪರ್ಧಿಯ ಪತಿಯ ಮೇಲೆ ಹಲ್ಲೆ

ಹುಬ್ಬಳ್ಳಿ: ಚುನಾವಣೆಯಲ್ಲಿ ತನ್ನ ಹೆಂಡತಿಯ ಸೋಲಿಗೆ ಇನ್ನೊಬ್ಬಾಕೆ ಸ್ಪರ್ಧಿಸಿದ್ದೇ ಕಾರಣವೆಂದು ಆಕೆಯ ಗಂಡನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಪ್ರಕರಣವೊಂದು ನಡೆದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಈ ಹೊಡೆದಾಟ ನಡೆದಿದ್ದು, ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲನ್ನೂ ಏರಿದೆ.

ಎಐಎಂಐಎಂ ಪಕ್ಷದ ಮುಖಂಡ ವಿಜಯ ಗುಂಟ್ರಾಳ ಮೇಲೆ ಹಲ್ಲೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಬೆಳದಡಿ ವಿರುದ್ಧ ಹಲ್ಲೆ ಆರೋಪ ಹೊರಿಸಿ ದೂರು ನೀಡಲಾಗಿದೆ. ಹುಬ್ಬಳ್ಳಿಯ ವಾರ್ಡ್‌ ನಂ. 69ರಲ್ಲಿ ಸ್ಪರ್ಧೆ ನಡೆಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕಮಲಾ ಶ್ರೀನಿವಾಸ ಬೆಳದಡಿ ಸೋತಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಇವರ ಪತಿ ಶ್ರೀನಿವಾಸ ಅವರು ತಮ್ಮ ಸಂಗಡಿಗರೊಂದಿಗೆ ಸೇರಿ ವಿಜಯ ಗುಂಟ್ರಾಳ ಮೇಲೆ ಹಲ್ಲೆ ನಡೆಸಿದ್ದಾರೆ.

ತಮ್ಮ ಪತ್ನಿಯ ಸೋಲಿಗೆ ವಿಜಯ ಗುಂಟ್ರಾಳ ಅವರ ಪತ್ನಿ ಲಕ್ಷ್ಮೀ ಪ್ರತಿಸ್ಪರ್ಧಿಯಾಗಿದ್ದೇ ಕಾರಣ ಎಂಬುದಾಗಿ ಆರೋಪಿಸಿ ಹಲ್ಲೆ ನಡೆಸಿದ್ದಾರೆ. ಕರ್ಕಿ ಬಸವೇಶ್ವರ ನಗರದಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಸ್ಥಳಕ್ಕೆ ಡಿಸಿಪಿ ಕೆ. ರಾಮರಾಜನ್ ಭೇಟಿ‌ ನೀಡಿ ಪರಿಶೀಲಿಸಿದ್ದಾರೆ. ಇನ್ನು ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ದುರ್ಗಮ್ಮ ಶಶಿಕಾಂತ ಬಿಜವಾಡ ಗೆದ್ದಿದ್ದಾರೆ.