ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಯುವತಿಯನ್ನು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ಮದುವೆಯಾಗುವುದಾಗಿ ನಂಬಿಸಿ ಕನ್ಯಾ ನೋಡುವ ಶಾಸ್ತ್ರ ಮುಗಿಸಿ 5.20 ಲಕ್ಷ ರೂ. ಪಡೆದು ವಂಚಿಸಿದ್ದಾನೆ.
ಯಲಚೇನಹಳ್ಳಿಯ ಹರ್ಷ ಲೇಔಟ್ ನಿವಾಸಿ 29 ವರ್ಷದ ಯುವತಿ ವಂಚನೆಗೊಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಮಂಡ್ಯ ಮೂಲದ ಮಧುಸೂದನ್ (32) ಎಂಬಾತನ ವಿರುದ್ಧ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಯುವತಿ ಮದುವೆ ಮಾಡಿಕೊಳ್ಳಲು ವರನಿಗಾಗಿ ತನ್ನ ಸ್ವವಿವರವನ್ನು ವೈವಾಹಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಮೇ 29ರಂದು ಮಧುಸೂದನ್ ಎಂಬಾತ ಪರಿಚಯವಾಗಿದ್ದ. ‘ನೀವು ನನಗೆ ಇಷ್ಟವಾಗಿದ್ದು, ಮದುವೆ ವಿಚಾರ ಮಾತನಾಡಬೇಕು’ ಎಂದು ಹೇಳಿ ಫೋನ್ ನಂಬರ್ ಪಡೆದಿದ್ದ.
ಮೇ 31ರಂದು ಯುವತಿಯ ಮನೆಗೆ ಹೋಗಿ ಕನ್ಯಾ ನೋಡುವ ಶಾಸ್ತ್ರವನ್ನೂ ಮುಗಿಸಿದ. ಈ ವೇಳೆ ‘ನಾನು ಮಂಡ್ಯ ಮೂಲದವನಾಗಿದ್ದು, ಅಪ್ಪ-ಅಮ್ಮ ಯಾರೂ ಇಲ್ಲ’ ಎಂದು ಹೇಳಿದ್ದ. ಇದಾದ ಕೆಲ ದಿನಗಳ ಬಳಿಕ ‘ಮನೆ ಖರೀದಿಸಲು ನಿರ್ಧರಿಸಿದ್ದೇನೆ. ಹಣ ಕಡಿಮೆ ಬಿದ್ದಿದೆ’ ಎಂದು ನಂಬಿಸಿ ಯುವತಿಯಿಂದ 4 ಲಕ್ಷ ರೂ. ಪಡೆದಿದ್ದ. ತದನಂತರ ಜೂ.12ರಂದು ಕ್ರೆಡಿಟ್ ಕಾರ್ಡ್ ಪಡೆದು, ಅದರಿಂದ 1.20 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದ. ಮನೆ ನೊಂದಣಿಗೆಂದು ಹೇಳಿ ಯುವತಿಯ ಆಧಾರ್‌ಕಾರ್ಡ್ ಪ್ರತಿ ತೆಗೆದುಕೊಂಡು ಹೋಗಿದ್ದ. ಜೂ. 13ರಂದು ಯುವತಿ, ಮಧುಸೂದನ್‌ಗೆ ೆನ್ ಮಾಡಿದ್ದು, ಸಂಪರ್ಕಕ್ಕೆ ಸಿಕ್ಕಿಲ್ಲ. ಜೂ. 14ರಂದು ಆತ ವಾಸವಿದ್ದ ಮನೆ ಬಳಿ ಹೋಗಿ ವಿಚಾರಿಸಿದಾಗ, ಮನೆ ಖಾಲಿ ಮಾಡಿಕೊಂಡು ಹೋಗಿರುವುದು ಗೊತ್ತಾಯಿತು. ಅಲ್ಲದೆ, ಮನೆ ಮಾಲೀಕನಿಗೂ ಹಣ ವಂಚಿಸಿರುವುದು ತಿಳಿಯಿತು. ಬೇರೆ ದಾರಿ ಕಾಣದೆ ಯುವತಿ ಈಗ ಪೊಲೀಸರ ಮೊರೆ ಹೋಗಿದ್ದಾಳೆ.