ತಿರುಪತಿ: ಜಲಪಾತದಲ್ಲಿ ಈಜಲು ಹೋಗಿ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ತಿರುಪಪತಿ ಬಳಿ ಇರುವ ತಲಕೋನಾ ಜಲಪಾತದಲ್ಲಿ ನಡೆದಿದೆ.
ಮೃತರನ್ನು ಸುಮಂತ್(22) ಎಂದು ಗುರುತಿಸಲಾಗಿದ್ದು, ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ತಮಿಳುನಾಡಿನ ಚೆನ್ನೈನಲ್ಲಿರುವ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಸುಮಂತ್ ಸ್ನೇಹಿತರ ಜೊತೆ ತಿರುಒತಿ ಬಳಿ ಇರುವ ತಲಕೋನ ಜಲಪಾತಕ್ಕೆ ಬಂದಿದ್ದಾರೆ. ಈ ವೇಳೆ ಅವರು ನೀರಿಗೆ ಧುಮುಕುತ್ತಿರುವ ವಿಡಿಯೋವನ್ನು ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸುವಂತೆ ಹೇಳಿದ್ದಾರೆ. ಅದರಂತೆ ಸ್ನೇಹಿತರು ಕೂಡ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.
ನೀರಿಗೆ ಧುಮುಕಿ ತುಂಬಾ ಸಮಯ ಕಳೆದರೂ ಸಹ ಸುಮಂತ್ ಮೇಲೆ ಬಾರದಿರುವುದನ್ನು ಗಮನಿಸಿದ ಸ್ನೇಹಿತರು ಕೂಡಲೇ ಹತ್ತಿರದ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಸುಮಂತ್ ತಲೆಯನ್ನು ಬಿಡಿಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕಳೆದ ಕೆಲ ತಿಂಗಳುಗಳ ಅವಧಿಯಲ್ಲಿ ತಲಕೋನ ಜಲಪಾತದಲ್ಲಿ ನಡೆದ ಮೂರನೇ ಅವಘಡ ಇದಾಗಿದೆ.