ಜಿಲ್ಲೆ

ಪ್ರೀತಿಸುವ ನಾಟಕ, ಐದೇ ತಿಂಗಳಲ್ಲಿ ಲಿವಿಂಗ್ ಟುಗೆದರ್​; ಅವಳಾಗುತ್ತಿದ್ದಂತೆ ಗರ್ಭಿಣಿ, ಇವನು ಪರಾರಿ...

ಬೆಂಗಳೂರು: ಯುವತಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದು, ಅವಳು ಗರ್ಭಿಣಿಯಾಗುತ್ತಿದ್ದಂತೆ ಕೈ ಕೊಟ್ಟು ಪರಾರಿಯಾಗಿದ್ದ ಯುವಕನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಬಾಗಲಗುಂಟೆಯ ನಿವಾಸಿ ಅರುಣ್ (28) ಬಂಧಿತ. ಬಾಗಲಗುಂಟೆ ನಿವಾಸಿ 25 ವರ್ಷದ ಯುವತಿ, ಇವೆಂಟ್ ಮ್ಯಾನೇಜ್‌ಮೆಂಟ್ ಕೆಲಸ ಮಾಡಿಕೊಂಡಿದ್ದಳು. ಕಳೆದ 10 ತಿಂಗಳ ಹಿಂದೆ ಅಲ್ಲೇ ಕೆಲಸ ಮಾಡುತ್ತಿದ್ದ ಸ್ನೇಹಿತೆಯ ಸಹೋದರ ಆರೋಪಿ ಅರುಣ್ ಪರಿಚಯವಾಗಿತ್ತು.
ಅರುಣ್ 5 ತಿಂಗಳ ಹಿಂದೆ ಯುವತಿಗೆ ಪ್ರೇಮನಿವೇದನೆ ಮಾಡಿದ್ದ. ನಂತರ ಇಬ್ಬರೂ ಲಿವಿಂಗ್ ಟುಗೆದರ್‌ನಲ್ಲಿದ್ದರು. ನಂತರ ವಿವಾಹವಾಗುವುದಾಗಿ ಯುವತಿಯನ್ನು ನಂಬಿಸಿ ಆಕೆಯಿಂದ ಹಂತ-ಹಂತವಾಗಿ 4 ಲಕ್ಷ ರೂ. ಪಡೆದುಕೊಂಡಿದ್ದ. ಈ ನಡುವೆ ಯುವತಿ ಗರ್ಭಿಣಿಯಾಗಿದ್ದಳು.

ಈ ವಿಚಾರ ಅರುಣ್‌ಗೆ ಗೊತ್ತಾಗುತ್ತಿದ್ದಂತೆ, ನಿನ್ನ ಜತೆ ನನಗೆ ಸಂಬಂಧವಿಲ್ಲ. ಮಗುವನ್ನು ತೆಗೆಸಿಬಿಡು, ನಾನು ನಿನ್ನನ್ನು ಪ್ರೀತಿಸುತ್ತಿಲ್ಲ. ಮದುವೆಯೂ ಆಗುವುದಿಲ್ಲ. ನೀನು ಏನು ಮಾಡುತ್ತೀಯೋ ಮಾಡಿಕೋ ಎಂದು ಹೇಳಿ ಪರಾರಿಯಾಗಿದ್ದ. ನಡೆದ ಸಂಗತಿಯನ್ನು ಸಂತ್ರಸ್ತೆ ಅರುಣ್ ಮನೆಯವರಿಗೂ ತಿಳಿಸಿದ್ದಳು.

ಆದರೆ, ಆತನ ಮನೆಯವರೇ ನನ್ನನ್ನು ಓಲೈಕೆ ಮಾಡಿ ಆಸ್ಪತ್ರೆಗೆ ಕರೆದೊಯ್ದು ಅಬಾರ್ಷನ್ ಮಾಡಿಸಿದ್ದಾರೆ. ನಂತರ ಕೆಲ ದಿನ ಆರೈಕೆ ಮಾಡಿ ಕಳುಹಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಸಂತ್ರಸ್ತೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಅರುಣ್ ವಿರುದ್ಧ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರುಣ್‌ನನ್ನು ಬಂಧಿಸಿ, ಜೈಲಿಗೆ ತಳ್ಳಿದ್ದಾರೆ.