ಜಿಲ್ಲೆ

ರಸ್ತೆಯಲ್ಲಿ ಫೋಟೋ ಇಟ್ಟು ಬಿಕ್ಕಿಬಿಕ್ಕಿ ಅತ್ತರು, ರಕ್ತ ಹರಿದ ಸ್ಥಳದಲ್ಲೇ ಕಣ್ಣೀರ ಧಾರೆ... ಮನಕಲಕುತ್ತೆ ಈ ದೃಶ್ಯ

ಧಾರವಾಡ: ಮಹಿಳೆ, ಮಕ್ಕಳು, ಪುರುಷರಾದಿಯಾಗಿ ಎಲ್ಲರ ಮುಖದಲ್ಲೂ ನಿರಾಶಭಾವ.. ಒತ್ತರಿಸಿ ಬರುತ್ತಿದ್ದ ದುಃಖ ತಡೆಯಲಾಗದ ಸ್ಥಿತಿಯಲ್ಲೇ ಸಾಲುಸಾಲಾಗಿ ಮೃತರ ಫೋಟೋಗಳನ್ನ ಇಟ್ಟು ಪೂಜೆ ಸಲ್ಲಿಸುತ್ತಾ ಬಿಕ್ಕಿಬಿಕ್ಕಿ ಅಳುತ್ತಿದ್ದರು... ಇದು ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬೈಪಾಸ್ ಬಳಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ದೃಶ್ಯ.

ಸಂಕ್ರಾಂತಿ ಹಬ್ಬದ ಮರುದಿನ(ಜ.15) ಧಾರವಾಡದ ಬೈಪಾಸ್​ನಲ್ಲಿ ಟಿಟಿ ಮತ್ತು ಟಿಪ್ಪರ್ ನಡುವೆ ಸಂಭವಿಸಿದ್ದ ಭೀಕರ ಅಪಘಾತ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಈ ಅಪಘಾತದಲ್ಲಿ ದಾವಣಗೆರೆ ಮೂಲದ 10 ಮಹಿಳೆಯರು ಸೇರಿ 12 ಜನ ಮೃತಪಟ್ಟಿದ್ದರು. ಅಂದು ಅಮಾಯಕರ ರಕ್ತ ಹರಿದು ಹೋಗಿದ್ದ ಅದೇ ಸ್ಥಳದಲ್ಲಿ ಇವತ್ತು(ಭಾನುವಾರ) ಕಣ್ಣೀರ ಧಾರೆ ಹರಿದಿದೆ. ಇದನ್ನೂ ಓದಿರಿ ಧಾರವಾಡದಲ್ಲಿ ಅಪಘಾತಕ್ಕೆ 13 ಬಲಿ: ಪ್ರತಿ ಜನವರಿ ಇದೇ ಜಾಗದಲ್ಲಿ ನಡೆಯುತ್ತೆ ಭೀಕರ ಆಕ್ಸಿಡೆಂಟ್​!

ಧಾರವಾಡದ ಬೈಪಾಸ್​ನಲ್ಲಿ ನಡೆದ ಅಪಾಘತಕ್ಕೆ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ.4ನ ಧಾರವಾಡ-ಹುಬ್ಬಳ್ಳಿ ಮಧ್ಯೆ ರಸ್ತೆ ಕಿರಿದಾಗಿರೋದೇ ಕಾರಣ ಅನ್ನೋ ಆಕ್ರೋಶ ಕೇಳಿ ಬಂದಿತ್ತು. ಇಂದು 40ಕ್ಕೂ ಹೆಚ್ಚು ವಾಹನಗಳಲ್ಲಿ ದಾವಣಗೆರೆಯಿಂದ ಘಟನಾ ಸ್ಥಳಕ್ಕೆ ಆಗಮಿಸಿದ ಮೃತರ ಕುಟುಂಬ ಸದಸ್ಯರು ಹಾಗೂ ಹಿತೈಷಿಗಳು ಅಪಘಾತ ಸ್ಥಳದಲ್ಲೇ ಪೂಜೆ ಮಾಡಿ, ಶಾಂತಿಯುತ ಪ್ರತಿಭಟನೆ ಮಾಡಿದರು. ಇನ್ಮುಂದೆ ಯಾವುದೇ ಸಾವು ಈ ರಸ್ತೆಯಲ್ಲಿ ಆಗದಿರಲಿ. ನಮ್ಮ ಮನೆಯವರನ್ನು ಕಳೆದುಕೊಂಡಿರೋದೇ ಕೊನೆಯಾಗಲಿ, ಬೇಗ ರಸ್ತೆ ಅಗಲೀಕರಣ ಆಗಲಿ ಎಂದು ಬೇಡಿಕೊಂಡರು.
ದಾವಣಗೆರೆಯಿಂದ ಆಗಮಿಸಿದ್ದ ಇವರಿಗೆಲ್ಲರಿಗೂ ಧಾರವಾಡದ ಸ್ಥಳೀಯರು ಬೆಂಬಲ ನೀಡಿದ್ದರು. ಕುಟುಂಬ ಸದಸ್ಯರ ದುಃಖದಲ್ಲಿ ಧಾರವಾಡಿಗರೂ ಭಾಗಿಯಾಗಿ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆಗೆ ಸಾಥ್ ನೀಡಿದರು. ಸುಮಾರು ಒಂದು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಬಂದ್ ಆಗಿತ್ತು. ರಸ್ತೆ ಮಧ್ಯದಲ್ಲೇ ಮೃತಪಟ್ಟವರ ಫೋಟೋಗಳನ್ನಿಟ್ಟು ಶಾಸ್ತ್ರೋಕ್ತವಾಗಿ ಪೂಜೆ ಮಾಡಿ, ಮೌನಾಚರಣೆಯನ್ನೂ ಮಾಡಲಾಯ್ತು. ಜೊತೆಗೆ ಇಷ್ಟು ವರ್ಷಗಳಿಂದ ರಸ್ತೆ ಅಗಲೀಕರಣಕ್ಕೆ ಕಾಳಜಿ ತೋರಿಸದ ಉತ್ತರ ಕರ್ನಾಟಕದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಕೇಳಿ ಬಂತು.

ಗೋವಾ ಪ್ರವಾಸಕ್ಕೆ ಹೊರಟಿದ್ದ ಬಾಲ್ಯ ಸ್ನೇಹಿತೆಯರು ಒಟ್ಟಾಗಿಯೇ ಬಾರದ ಲೋಕಕ್ಕೆ ಹೋದ ಈ ಅಪಘಾತ ಪ್ರಕರಣ ಇಂದಿಗೂ ಮರೆಯಲಾಗಲಾದ ಕಹಿ ಘಟನೆಯಾಗಿಯೇ ಉಳಿದುಕೊಂಡಿದೆ. ತಮ್ಮವರನ್ನು ಕಳೆದುಕೊಂಡ ಬಳಿಕ ಕುಟುಂಬ ಸದಸ್ಯರು, ನಮ್ಮಂತೆ ಮತ್ತೊಬ್ಬರಿಗೆ ಇಂತಹ ಸ್ಥಿತಿ ಬಾರದಿರಲಿ ಎಂಬ ಕಾಳಜಿಯೊಂದಿಗೆ ಘಟನಾ ಸ್ಥಳಕ್ಕೆ ಬಂದು ಪ್ರತಿಭಟನೆ ದಾಖಲಿಸೋ ಕಾರ್ಯ ಮಾಡಿದ್ದಾರೆ. ಇನ್ನಾದ್ರೂ ಜನಪ್ರತಿನಿಧಿಗಳು ಈ ರಸ್ತೆ ಅಗಲೀಕರಣಕ್ಕೆ ನಿಜವಾದ ಕಾಳಜಿ ತೋರುವರೇ? ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)