ಜಿಲ್ಲೆ

ಬೆಂಕಿಯಿಂದ ಬಾಣಲೆಗೆ: ಕೂಲಿಗೆ ಹೋಗುವಂತಿಲ್ಲ, ಬೆಂಗಳೂರು ಬಿಟ್ಟರೂ ಬವಣೆ ತಪ್ಪಿಲ್ಲ

ಸತೀಶ್ ಕೆ.ಬಳ್ಳಾರಿ
ಬೆಂಗಳೂರು: ಲಾಕ್​ಡೌನ್ ವೇಳೆ ತೀವ್ರ ಸಂಕಷ್ಟ ಅನುಭವಿಸಿ ಊರಿಗೆ ಹೋದ ಲಕ್ಷಾಂತರ ವಲಸೆ ಕಾರ್ವಿುಕರಿಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ. ಹೀಗಾಗಿ ಸಾವಿರಾರು ಕುಟುಂಬಗಳು ದುಡಿಮೆಯನ್ನೂ ಮಾಡಲಾಗದೆ, ಬಹುತೇಕರು ಊಟಕ್ಕೂ ಬೇಡುವಂತಾಗಿದೆ. ದುಡಿಮೆ ಸ್ಥಳ ಬಿಟ್ಟು ಊರಿಗೆ ಹೋದವರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿದ್ದು, ಉಳುಮೆ ಸೇರಿ ಬಿತ್ತನೆ ಕಾರ್ಯಗಳೂ ಆರಂಭವಾಗಿವೆ. 2020ರಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ರೈತರು ಹೆಚ್ಚಾಗಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಕೃಷಿ ಜತೆಗೆ ತಾತ್ಕಾಲಿಕ ಅವಧಿಗೆ ಕೆಲಸವನ್ನರಸಿ ವಲಸೆ ಹೋಗಿ ಬಂದವರಿಗೆ ಹೋಮ್ ಕ್ವಾರಂಟೈನ್ ಶಿಕ್ಷೆಯಾಗಿ ಪರಿಣಮಿಸಿದೆ. ಈಗ ಕೂಲಿಗೂ ಹೋಗಲಾಗದೆ, ಕೃಷಿ ಕಾರ್ಯಕ್ಕೂ ಮನೆಯಿಂದ ಹೊರ ಬರಲಾಗದೆ, ಎರಡೂ ಕಡೆಯಿಂದ ನಷ್ಟ ಅನುಭವಿಸುವಂತಾಗಿದೆ.
ಶೇ.90 ಕೃಷಿಕರು: ವಲಸೆ ಕಾರ್ವಿುಕರಲ್ಲಿ ಶೇ.90 ಕಾರ್ವಿುಕರು ಕೃಷಿ ಭೂಮಿ ಹೊಂದಿದ್ದಾರೆ. ಅದರಲ್ಲಿ ಶೇ.60 ಕಾರ್ವಿುಕರು ನೇರ ರೈತರಾಗಿದ್ದು, ತಾತ್ಕಾಲಿಕ ಅವಧಿಗೆ ಪ್ರತಿ ವರ್ಷ ಕೂಲಿಗಾಗಿ ವಲಸೆ ಹೋಗುತ್ತಾರೆ. ವಲಸೆ ಹೋದವರು, ದುಡಿಮೆ ಹಣವನ್ನು ಕೃಷಿಗೆ ಬಂಡವಾಳವಾಗಿ ಬಳಸುತ್ತಿದ್ದರು. ಆದರೀಗ ಲಾಕ್​ಡೌನ್​ನಿಂದ ದುಡಿಮೆಯೂ ಇಲ್ಲ್ಲ ಕೂಲಿಯೂ ಇಲ್ಲ, ಕೃಷಿ ಕಾರ್ಯಕ್ಕೆ ಬಂಡವಾಳವೂ ಇಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಮರ್ಯಾದೆಗಂಜಿ ಸಿಗುತ್ತಿಲ್ಲ ಗಂಜಿ..: ರಾಜ್ಯದ ವಿವಿಧ ಜಿಲ್ಲೆಗಳಿಂದ ಕಳೆದ 6 ದಿನಗಳಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಬೈಕ್, ಬಸ್, ಕಾರು ಹಾಗೂ ವಿವಿಧ ವಾಹನಗಳಲ್ಲಿ ಊರುಗಳನ್ನು ಸೇರಿಕೊಂಡಿದ್ದಾರೆ. ಆದರಲ್ಲಿ ಸುಮಾರು 50 ಸಾವಿರಕ್ಕೂ (ಶೇ.30) ಹೆಚ್ಚು ಬಡ ಕೂಲಿ ಕಾರ್ವಿುಕರಿದ್ದಾರೆ. ಲಾಕ್​ಡೌನ್ ವೇಳೆ ನಗರ ಪ್ರದೇಶಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಕಾರ್ವಿುಕ ಇಲಾಖೆಯ ದಾಸೋಹ ಸಹಾಯವಾಣಿಯಿಂದ ವಲಸೆ ಕಾರ್ವಿುಕರಿಗೆ ಆಹಾರ ಹಾಗೂ ದಿನಸಿ ಕಿಟ್​ಗಳನ್ನು ಕೊಡಲಾಗುತ್ತಿತ್ತು. ಗ್ರಾಮೀಣ ಭಾಗದಲ್ಲಿ ಇದ್ಯಾವುದೂ ಸಿಗದೆ ಕೈಯೊಡ್ಡುವಂತಾಗಿದೆ. ಸ್ವಂತ ಊರಿನಲ್ಲಿ ಮರ್ಯಾದೆಗೆ ಅಂಜಿ ಕೈಯೊಡ್ಡಿ ಬೇಡಲಾಗದೆ, ಹಸಿವಿನಿಂದ ಬಳಲುವ ಸ್ಥಿತಿ ನಿರ್ವಣವಾಗಿದೆ.
ಬೆಂಗಳೂರಿನಿಂದ ಕಟ್ಟಡ ನಿರ್ಮಾಣ ಕೆಲಸ ಬಿಟ್ಟು ಭಾನುವಾರ ಊರಿಗೆ ಬಂದಿದ್ದೇವೆ. ಕೈಗೆ ಸೀಲ್ ಹಾಕಿದ್ದು, ಮನೆಯಿಂದ ಹೊರಬರದಂತೆ ತಿಳಿಸಿದ್ದಾರೆ. ಇಲ್ಲಿ ಕೂಲಿಗೂ ಹೋಗಲಾಗದೆ, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಒಂದು ತುತ್ತಿನ ಆಹಾರಕ್ಕೂ ಇನ್ನೊಬ್ಬರ ಬಳಿ ಬೇಡುವಂತಾಗಿದ್ದು, ಸರ್ಕಾರ ನೆರವಿಗೆ ಬರಬೇಕು.
| ಕರಿಬಸವ ಯಾದಗಿರಿ
ನಗರ ಪ್ರದೇಶಗಳಿಂದ ಊರಿಗೆ ಹೋದ ಎಲ್ಲ ಕಾರ್ವಿುಕರೂ 14 ದಿನಗಳ ಕಾಲ ಕಡ್ಡಾಯವಾಗಿ ಮನೆಯಲ್ಲಿರಬೇಕು. ಇದರಿಂದ ಕರೊನಾ ಸೋಂಕು ತಡೆಯಲು ಸಾಧ್ಯವಾಗುತ್ತದೆ. ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಯಾರೂ ಹೊರ ಹೋಗಬಾರದು.
| ಎಸ್.ಶಿವರಾಂ ಹೆಬ್ಬಾರ್ ಕಾರ್ವಿುಕ ಸಚಿವ