ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಟೆಂಡರ್ ಒಪ್ಪಂದ ನಿಯಮಗಳನ್ನೇ ಗಾಳಿಗೆ ತೂರಲಾಗಿದ್ದು ಇದರಲ್ಲಿ ಗೋಲ್ ಮಾಲ್ ನಡೆದಿರುವುದು ಸ್ಪಷ್ಟವಾಗಿದೆ ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯ ಜೆ.ಕುಮಾರ್ ಆರೋಪಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ಎಲ್‌ಇಡಿ ಬೀದಿದೀಪ ಅಳವಡಿಸುವ ಪ್ರಾಯೋಗಿಕ ಯೋಜನೆ (ಪೈಲೆಟ್ ಪ್ರಾಜೆಕ್ಟ್ )ಗೆ ಸ್ಮಾರ್ಟ್‌ಸಿಟಿ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ. ಈ ಗುತ್ತಿಗೆ ಪಡೆದುಕೊಂಡಿರುವ ವೈಟ್ ಪ್ಲೆಕಾರ್ಡ್ ಟೆಕ್ನಾಲಜೀಸ್ ಸಂಸ್ಥೆ ವಿರುದ್ಧ ಸೂಕ್ತ ಕಾರ್ಯ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಘಾಜಿಯಾಬಾದ್‌ನಲ್ಲಿ ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಈಗ ಅಂತಹ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿರುವುದು ಭ್ರಷ್ಟಾಚಾರದ ವಾಸನೆ ಮೂಗಿಗೆ ಬಡಿಯಲು ಕಾರಣವಾಗಿದೆ ಎಂದರು.
75 ಕೋಟಿ ಭರಿಸಬೇಕು: ಈ ಪೈಲೆಟ್ ಪ್ರಾಜೆಕ್ಟ್ ಒಪ್ಪಂದದಂತೆ ಪ್ರತಿ ತಿಂಗಳು 62 ಲಕ್ಷ ರೂ., ಹಾಗೂ 12 ಲಕ್ಷ ಜಿಎಸ್ಟಿ ಸೇರಿ 74 ಲಕ್ಷ ರೂ. ನಿರ್ವಹಣೆ ವೆಚ್ಚ ಭರಿಸಬೇಕಿದೆ. ಮುಂದಿನ ಏಳು ವರ್ಷಗಳಲ್ಲಿ ಪಾಲಿಕೆ ಗುತ್ತಿಗೆ ಪಡೆದುಕೊಂಡಿರುವ ಈ ಸಂಸ್ಥೆಗೆ ಒಟ್ಟು 75 ಕೋಟಿ ರೂ.ಗಳನ್ನು ಪಾವತಿಸಬೇಕಾಗುತ್ತದೆ. 7 ವರ್ಷಗಳ ಬಳಿಕ ಪಾಲಿಕೆಗೆ ಹಸ್ತಾಂತರಿಸಲಿದ್ದು ಆ ನಂತರ ಪಾಲಿಕೆ ವತಿಯಿಂದಲೇ ನಿರ್ವಹಣೆ ಮಾಡಬೇಕಿದೆ. ಇಷ್ಟು ದೊಡ್ಡಮೊತ್ತವನ್ನು ಜನರ ಕಟ್ಟುವ ತೆರಿಗೆ ಹಣದಿಂದ ಬೀದಿದೀಪಕ್ಕೆ ಹಾಕಿದರೆ ನಗರದ ಅಭಿವೃದ್ಧಿ ಹೇಗೆ ಸಾಧ್ಯವಾಗಲಿದೆ. ಈ ಯೋಜನೆ ಅನುಷ್ಠಾನ ಹಿಂದೆ ದೊಡ್ಡವರ ಕೈವಾಡ ಇದೆ ಎಂದು ಕುಮಾರ್ ಆರೋಪಿಸಿದರು.