ಜಿಲ್ಲೆ

ಶಿಕ್ಷಣ ನಮ್ಮ ಜನ್ಮಸಿದ್ಧ ಹಕ್ಕು : ದಿನೇಶ್ ಹೆಗ್ಡೆ ಉಳೆಪಾಡಿ ಹೇಳಿಕೆ

ಸುಳ್ಯ: ಹಿಂದಿನ ಕಾಲದಲ್ಲಿ ಶಿಕ್ಷಣ ಕೇವಲ ಉಳ್ಳವರ ಸೊತ್ತಾಗಿದ್ದರೆ ಈಗ ಶಿಕ್ಷಣ ಪಡೆಯುವುದು ಜನ್ಮಸಿದ್ಧ ಹಕ್ಕು ಎಂಬಂತಾಗಿದೆ. ಇದಕ್ಕೆ ನಮ್ಮ ಶ್ರೇಷ್ಠ ಸಂವಿಧಾನ ಕಾರಣ ಎಂದು ಖ್ಯಾತ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಹೇಳಿದರು.

ಪ್ರಜಾಧ್ವನಿ ಕರ್ನಾಟಕ, ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದ ಭಾಗವಾಗಿ ಕಾಲೇಜು ಮಕ್ಕಳಿಗೆ ಕಾನೂನು, ಸಂವಿಧಾನದ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು. ಒಬ್ಬ ವ್ಯಕ್ತಿ ತನಗೆ ಅನ್ಯಾಯವಾದರೆ ಕೇವಲ ಒಂದು ಪತ್ರ ಬರೆಯುವುದರ ಮುಖೇನ ಹೈಕೋರ್ಟ್, ಸುಪ್ರೀಂ ಕೋರ್ಟ್ ಬಳಿಗೆ ಬರುವ ವ್ಯವಸ್ಥೆಯಿದೆ. ಇದಕ್ಕೆಲ್ಲಾ ಕಾರಣ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ನಮ್ಮ ಸಂವಿಧಾನ ಎಂದು ವಿವರಿಸಿದರು.

ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕ ಕೆ.ಪಿ.ಜಾನಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಶಿಕ್ಷಕ ಸೋಮಶೇಖರ್ ಪಿ. ಕಾರ್ಯಕ್ರಮ ಉದ್ಘಾಟಿಸಿದರು. ಪ್ರಜಾಧ್ವನಿ ಕರ್ನಾಟಕದ ಸಂಚಾಲಕ ಗೋಪಾಲ್ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಕಾಂತಿ ಬಿ.ಎಸ್. ಸ್ವಾಗತಿಸಿದರು. ಪ್ರಾಧ್ಯಾಪಕ ಸುರೇಶ್ ವಾಗ್ಲೆ ವಂದಿಸಿದರು. ಪ್ರಾಧ್ಯಾಪಕ ಪದ್ಮಕುಮಾರ್ ಕಾರ್ಯಕ್ರಮ ನಿರೂಪಿಸಿದರು.