

ಮಂಗಳೂರು: ನಗರದ ಉದ್ಯಮಿಯೊಬ್ಬರಿಗೆ ಭೂಗತ ಪಾತಕಿ ಕಲಿ ಯೋಗೀಶನ ಹೆಸರಿನಲ್ಲಿ ಬೆದರಿಕೆ ಕರೆ ಬಂದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬಜ್ಪೆಯ ಉದ್ಯಮಿ ರೊನಾಲ್ಡ್ ಎಂಬವರಿಗೆ ಜ.17ರಂದೇ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಶನಿವಾರ ಬಜ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭೂಗತ ಪಾತಕಿ ಕಲಿ ಯೋಗೀಶನ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ 3 ಕೋಟಿ ರೂ. ನೀಡಬೇಕು. ಇಲ್ಲದಿದ್ದರೆ ಮನೆ ಮಂದಿಯನ್ನೆಲ್ಲ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರೊನಾಲ್ಡ್ ಅವರು ಕೆಂಪು ಕಲ್ಲಿನ ಕ್ವಾರಿ ಸೇರಿದಂತೆ ಇತರ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಕರಾವಳಿಯ ಉದ್ಯಮಿಗಳಿಗೆ ಹಪ್ತಾಕ್ಕೆ ಬೇಡಿಕೆ ಇಟ್ಟು ಭೂಗತ ಪಾತಕಿಗಳ ಬೆದರಿಕೆ ಕರೆ ಬರೋದು ಕೆಲ ಸಮಯದಿಂದ ಕಡಿಮೆಯಾಗಿತ್ತು. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ.