ಜಿಲ್ಲೆ

ನಾಯಿ ಬೊಗಳಿತೆಂದು ತಡರಾತ್ರಿ ಆಚೆ ಬಂದರು, ಕಣ್ಣೆದುರಲ್ಲೇ ನಡೆಯಿತು ಘೋರ ಕೃತ್ಯ

arunakunigal

ಬೆಳ್ತಂಗಡಿ: ಮನೆ ಹೊರಗಡೆ ನಾಯಿ ಬೊಗಳಿತೆಂದು ಗುರುವಾರ ತಡರಾತ್ರಿ ಮನೆಯ ಮಾಲೀಕ ಬಾಗಿಲು ತೆರೆದರಷ್ಟೇ... ನೋಡನೋಡುತ್ತಿದ್ದಂತೆ ಒಳ ನುಗ್ಗಿದ ನಾಲ್ವರು ಮುಸುಕುಧಾರಿಗಳ ತಂಡ ಮನೆಯವರನ್ನು ಕಟ್ಟಿಹಾಕಿ ನಗದು, ಚಿನ್ನ, ಬೆಳ್ಳಿ ದೋಚಿದ್ದಾರೆ.

ಧರ್ಮಸ್ಥಳ ಗ್ರಾಮ ವ್ಯಾಪ್ತಿಯ ನೀರಚಿಲುಮೆಯ ಅಚ್ಚುತ ಭಟ್​ ಎಂಬುವರ ಮನೆಯಲ್ಲಿ ದರೋಡೆಕೋರರು 40 ಪವನ್​ ಚಿನ್ನ, 1 ಕೆಜಿ ಬೆಳ್ಳಿ, 25 ಸಾವಿರ ರೂ. ಲೂಟಿ ಹೊಡೆದಿದ್ದಾರೆ. ಇದನ್ನೂ ಓದಿರಿ video/ ತರಕಾರಿ-ಹಣ್ಣು ತುಂಬುವ ಕ್ರೇಟ್​ನಲ್ಲಿದೆ 85 ಕೆ.ಜಿ. ಗಾಂಜಾ!

ಗುರುವಾರ ರಾತ್ರಿ ಎಂದಿನಂತೆ ಅಚ್ಚುತ ಭಟ್​ ಕುಟುಂಬ ಮಲಗಿತ್ತು. ತಡರಾತ್ರಿ ಮನೆ ಹೊರಗಡೆ ನಾಯಿ ಬೊಗಳುತಿತ್ತು. ಏನಿರಬಹುದೆಂದು ಅಚ್ಚುತ ಭಟ್​ ಬಾಗಿಲು ತೆರೆದು ಅಂಗಳಕ್ಕೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಮರಳಿ ಮನೆಯೊಳಗೆ ಹೋಗಿ ಬಾಗಿಲು ಹಾಕುವ ವೇಳೆ ಹಿಂಬದಿಯಿಂದ ಮುಸುಕುಧಾರಿ ವ್ಯಕ್ತಿಯೋರ್ವ ಒಳಗೆ ನುಗ್ಗಿ ಅವರನ್ನು ಹಗ್ಗದಲ್ಲಿ ಕಟ್ಟಿ ಹಾಕಿದ್ದಾನೆ. ಬಳಿಕ 80 ವರ್ಷದ ತಾಯಿ ಹಾಗೂ ಸಹೋದರಿಯನ್ನೂ ಮುಸುಕುಧಾರಿಗಳ ತಂಡ ಕಟ್ಟಿಹಾಕಿದೆ. ಮನೆಯೊಳಗಿನ ಕಪಾಟುಗಳನ್ನು ಒಡೆದು ಹಾಕಿ ಚಿನ್ನ, ಬೆಳ್ಳಿ, ನಗದು ದೋಚಿ ಪರಾರಿಯಾಗಿದೆ.

ಹಗ್ಗದಲ್ಲಿ ಬಂಧಿಯಾಗಿದ್ದ ಸಂದರ್ಭ ಉರುಳಾಡಿದ್ದರಿಂದ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಸಂದರ್ಭ ಮನೆಯಲ್ಲಿ ಮೂವರು ಮಕ್ಕಳು ಇದ್ದರು. ಅದೃಷ್ಟವಶಾತ್​ ಅವರಿಗೆ ಯಾವುದೇ ತೊಂದರೆ ಮಾಡಿಲ್ಲ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಬೆಳ್ತಂಗಡಿ ಸರ್ಕಲ್​ ಇನ್ಸ್​ಪೆಸ್ಪೆಕ್ಟರ್​ ಸಂದೇಶ ಪಿ.ಜಿ. ಸ್ಥಳ ಪರಿಶೀಲನೆ ನಡೆಸಿದರು. ಸಿಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಆರೋಪಿಗಳನ್ನು ಶ್ರೀಘ್ರ ಪತ್ತೆ ಹಚ್ಚಲಾಗುವುದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಹಾಗೂ ಕಾರ್ಕಳದ ಮಾಡ ಎಂಬಲ್ಲಿ ಈ ಹಿಂದೆ ನಡೆದಿದ್ದ ದರೋಡೆ ಪ್ರಕರಣಕ್ಕೂ ಇದಕ್ಕೂ ಸಂಬಂಧವಿದೆಯೇ ಎಂದು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.