ಜಿಲ್ಲೆ

ಅಬಕಾರಿಗೆ ಇಂಧನ ಪರದಾಟ: ಬಂಕ್​ಗಳಲ್ಲಿ ಉದ್ರಿ ಕೊಡ್ತಾಯಿಲ್ಲ, ಅನುದಾನ ಕೊರತೆ

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತರುವ ಅಬಕಾರಿ ಇಲಾಖೆ ವಾಹನಗಳಿಗೆ ಇಂಧನ ಕೊರತೆ ಎದುರಾಗಿದೆ. ಅನುದಾನ ಬಿಡುಗಡೆಯಾಗದೆ ಇಂಧನ ತುಂಬಿಸಲು ಅಧಿಕಾರಿ, ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಬಂಕ್​ಗಳಲ್ಲಿ ಪದೇಪದೇ ಪೆಟ್ರೋಲ್, ಡೀಸೆಲ್ ಸಾಲವಾಗಿಯೂ ಸಿಗುತ್ತಿಲ್ಲ. ಹೀಗಾಗಿ ದಾಳಿ ಮತ್ತಿತರ ಕರ್ತವ್ಯಕ್ಕೆ ತೆರಳುವಾಗ ವಾಹನ ಬಳಕೆಗೆ ಕಡಿಮೆಗೊಳಿಸಲು ಸೀಟುಗಳ ಸಾಮರ್ಥ್ಯ ಮೀರಿ 9-10 ಅಧಿಕಾರಿ, ಸಿಬ್ಬಂದಿ ಪ್ರಯಾಣಿಸುವಂತಾಗಿದೆ.

ಡಿಸಿ ಸ್ಕಾ ್ವಡ್ ವೆಹಿಕಲ್​ಗಳು, ಮಹೀಂದ್ರ, ಬೊಲೆರೊ, ಟಾಟಾ, ಮಾರುತಿ ಸಿಯಾಜ್ ಕಾರು ಸೇರಿ ರಾಜ್ಯದ 40 ಅಬಕಾರಿ ಜಿಲ್ಲೆಗಳ ಪೈಕಿ ಪ್ರತಿ ಜಿಲ್ಲೆಗೆ ಕನಿಷ್ಠ 10-15 ರಂತೆ 400-500ಕ್ಕೂ ಅಧಿಕ ವಾಹನಗಳಿವೆ. ಅನುದಾನವಿಲ್ಲದೆ ಇವುಗಳಿಗೆ ಇಂಧನ ತುಂಬಿಸುವುದು ಅಧಿಕಾರಿಗಳಿಗೆ ಸವಾಲಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಐದಾರು ತಿಂಗಳು, ಕೆಲವೆಡೆ ಮೂರ್ನಾಲ್ಕು ತಿಂಗಳಿನಿಂದ ಇಂಧನ ಬಿಲ್ ಪಾವತಿ ಆಗಿಲ್ಲ. ಈ ಮೊದಲು ಇಲಾಖೆಯಲ್ಲಿ ‘ಪೇಡ್ ಬೈ ಮಿ’ ಪದ್ಧತಿ ಇತ್ತು. ಇದರಡಿ ಅಧಿಕಾರಿಗಳು ಇಂಧನ ವೆಚ್ಚ ಭರಿಸಿ ನಂತರ ಮರುಪಾವತಿ ಪಡೆದುಕೊಳ್ಳುತ್ತಿದ್ದರು. ಕಳೆದ ವರ್ಷದಿಂದ ಇಲಾಖೆ ಈ ಪದ್ಧತಿ ಕೈ ಬಿಟ್ಟಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಸಕಾಲಕ್ಕೆ ಬಿಲ್ ಪಾವತಿ ಆಗುತ್ತಿಲ್ಲ. ಮೊದಲಿದ್ದ ಪದ್ಧತಿಯೂ ಈಗಿಲ್ಲ. ಇಂಧನ ಹಾಕಿಸಿದರೆ ರಿಫಂಡ್ ಕೂಡ ಆಗದು. ಹೀಗಾಗಿ ವಾಹನಗಳನ್ನು ಓಡಿಸುವುದು ಹೇಗೆಂಬ ಚಿಂತೆ ಅಧಿಕಾರಿಗಳನ್ನು ಕಾಡಿದೆ. ಈ ಕುರಿತು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಗಮನಕ್ಕೂ ತಂದಿದ್ದಾರೆ.

ಹೊಸದಾಗಿ ಮೂರು ವಿಭಾಗಗಳು

ಈಗಾಗಲೇ 7 ಅಬಕಾರಿ ವಿಭಾಗಗಳೊಂದಿಗೆ ಮೂರು ಹೊಸ ವಿಭಾಗಗಳನ್ನು ರಚಿಸಿ ಸರ್ಕಾರ 2023 ಡಿ. 22 ರಂದು ಆದೇಶಿಸಿದೆ. ಬೆಂಗಳೂರು ಉತ್ತರ ,ದಕ್ಷಿಣ, ಬೆಳಗಾವಿ, ಕಲಬುರಗಿ, ಹೊಸಪೇಟೆ, ಮಂಗಳೂರು, ಮೈಸೂರು ವಿಭಾಗಗಳೊಂದಿಗೆ ದಾವಣಗೆರೆ, ಬೆಂ.ಗ್ರಾಮಾಂತರ, ಗುಪ್ತಚರ ವಿಭಾಗಗಳನ್ನು ಹೊಸದಾಗಿ ರಚಿಸಲಾಗಿದೆ.

ವಾಹನಗಳು ಗುಜರಿಗೆ?

ಇಂಧನಕ್ಕೆ ದುಡ್ಡಿಲ್ಲ, ಜತೆಗೆ ಹಳೆಯ ವಾಹನಗಳನ್ನು ಗುಜರಿಗೆ ನೀಡಬೇಕಾದ ಭೀತಿ ಎದುರಾಗಿದೆ. ಕಳೆದ ಏಪ್ರಿಲ್ 1 ರಿಂದ ಜಾರಿಯಾದ ಸೆಂಟ್ರಲ್ ಮೋಟಾರ್ ವೆಹಿಕಲ್ ಆಕ್ಟ್ ಅನ್ವಯ 15 ವರ್ಷ ಮೀರಿದ ವಾಹನಗಳಿಗೆ ಸಾರಿಗೆ ಇಲಾಖೆ ದೃಢೀಕರಣ ಪತ್ರಗಳನ್ನು ಕೊಡುತ್ತಿಲ್ಲ. ಅವಧಿ ಮೀರುತ್ತಿರುವ, ಮೀರಿರುವ ವಾಹನಗಳು ಅಬಕಾರಿ ಇಲಾಖೆಯಲ್ಲೂ ಇವೆ. ಈ ವಾಹನಗಳನ್ನು ಗುಜರಿಗೆ ನೀಡಿದರೆ ಕರ್ತವ್ಯಕ್ಕೆ ಹೇಗೆ ತೆರಳಬೇಕೆಂಬ ಪ್ರಶ್ನೆ ಎದುರಾಗಿದೆ.

ರಹಸ್ಯ ನಿಧಿಗೂ ತತ್ವಾರ

ಅಬಕಾರಿ ಇಲಾಖೆ ವಾಹನಗಳಿಗೆ ಇಂಧನ ವೆಚ್ಚದ ಅನುದಾನ ಕೊರತೆ ಜತೆ, ರಹಸ್ಯನಿಧಿ ಹಾಗೂ ಕಚೇರಿ ನಿರ್ವಹಣಾ ವೆಚ್ಚಕ್ಕೂ ತತ್ವಾರವಾಗಿದೆಯಂತೆ. ಮಾಹಿತಿ ಸಂಗ್ರಹ ಖರ್ಚಿಗೂ ಕಾಸಿಲ್ಲ, ಹೆಚ್ಚೂ ಕಡಿಮೆ ಒಂದು ವರ್ಷದಿಂದ ರಹಸ್ಯ ನಿಧಿಗೆ ತೊಂದರೆ ಆಗುತ್ತಿದೆ. ಕಚೇರಿ ನಿರ್ವಹಣೆಗೆ ಅತ್ಯಗತ್ಯ ವಸ್ತುಗಳ ಖರೀದಿಗೂ ದುಡ್ಡಿಲ್ಲ ಎನ್ನುತ್ತಿವೆ ಇಲಾಖೆ ಮೂಲಗಳು.