ಜಿಲ್ಲೆ

ಕುಂದಾಪುರ ಎಸಿ ದಿಢೀರ್ ವರ್ಗಾವಣೆ: ಬೈಂದೂರು ಮಾಜಿ ಶಾಸಕನ ಕೈವಾಡ ಆರೋಪ

Avinash R

ಉಡುಪಿ: ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಅವರನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಿದ್ದು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ನಿಯುಕ್ತಿಗೊಳಿಸಿದೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಮಹೇಶ್ಚಂದ್ರ ಅವರನ್ನು ಕುಂದಾಪುರ ಉಪವಿಭಾಗಾಧಿಕಾರಿಯಾಗಿ ನೇಮಿಸಿ ಸರ್ಕಾರ ನಿಯುಕ್ತಿಗೊಳಿಸಿದೆ. ವರ್ಷದ ಹಿಂದೆಯಷ್ಟೇ ಕುಂದಾಪುರಕ್ಕೆ ವರ್ಗವಾಗಿ ಬಂದಿದ್ದ ರಶ್ಮಿ ಅವರು ಉತ್ತಮ ಸೇವೆಯ ಮೂಲಕ ಹಾಗೂ ಜನತೆಯೊಂದಿಗೆ ಸಹಜವಾಗಿ ಬೆರೆಯುವ ಮೂಲಕ ಗಮನ ಸೆಳೆದಿದ್ದರು. ಇದೀಗ ಅವರ ವರ್ಗಾವಣೆಯಲ್ಲಿ ಬೈಂದೂರಿನ ಮಾಜಿ ಶಾಸಕನ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದೆ. ಅವರ ಒತ್ತಡಕ್ಕೆ ಮಣಿದ ಸರ್ಕಾರ, ದಕ್ಷ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ ನೀಡಿದೆ ಎಂಬ ಮಾತೂ ಕೇಳಿಬರುತ್ತಿದ್ದೆ.

ಬೈಂದೂರು ವಾಜಿ ಶಾಸಕನ ಆಪ್ತನೋರ್ವನ ಜಾಗಕ್ಕೆ ಸಂಬಂಧಿಸಿ ತಕರಾರು ಇದ್ದು, ಅದಕ್ಕೆ ಎಸಿ ಸಹಕರಿಸಲಿಲ್ಲ ಎನ್ನಲಾಗಿದೆ. ಆದರೂ ಕಾನೂನು ಮೀರಿ ತಕರಾರು ವಿಲೇ ಮಾಡುವಂತೆ ಅವರಿಗೆ ಒತ್ತಡ ಹೇರಲಾಗಿತ್ತು. ಆದರೆ, ಕಾನೂನು ವ್ಯಾಪ್ತಿಯಲ್ಲೇ ಕೆಲಸ ವಾಡುವುದಾಗಿ ಎಸಿ ತಿಳಿಸಿದ್ದರು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಅವರನ್ನು ವರ್ಗಾಯಿಸಲಾಗಿದೆ ಎನ್ನಲಾಗುತ್ತಿದೆ.

ನಿಷ್ಠವಂತ ಮಹಿಳಾ ಅಧಿಕಾರಿಯ ದಿಢೀರ್ ವರ್ಗಾವಣೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.