ವಿಜಯವಾಣಿ ಸುದ್ದಿಜಾಲ ಕಾರ್ಕಳ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಾಗಿ ಅಗೆಯಲಾಗಿದ್ದ ಗುಡ್ಡೆಗೆ ತಡೆಗೋಡೆ ನಿರ್ಮಿಸದಿದ್ದರಿಂದ ವಿದ್ಯುತ್ ಟವರ್ ಧರಾಶಾಯಿಯಾಗುವ ಅಪಾಯದ ಕುರಿತು ಎಚ್ಚೆತ್ತುಕೊಂಡ ಅಧಿಕಾರಿಗಳು ಕೊನೆಗೂ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಾರ್ಕಳದ ಸಾಣೂರು ಬಳಿಯಲ್ಲಿ ಹಾದು ಹೋಗುವ ರಾ.ಹೆ 169ರ ಕಾಮಗಾರಿಗಾಗಿ ಗುಡ್ಡ ಅಗೆಯಲಾಗಿತ್ತು. ಇದರಿಂದ ಗುಡ್ಡದ ಮೇಲ್ಭಾಗದಲ್ಲಿದ್ದ 220 ಕೆ.ವಿ ಹೈಟೆನ್ಷನ್ ವಿದ್ಯುತ್ ಟವರ್ ಹಾಗೂ ನೀರಿನ ಟ್ಯಾಂಕ್‌ಗೆ ಅಪಾಯವಿದ್ದು, ಗ್ರಾಮಸ್ಥರು ಅನೇಕ ಬಾರಿ ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿದ್ದರೂ ಪ್ರಯೋಜವಾಗಿರಲಿಲ್ಲ. ಈ ಬಗ್ಗೆ ವಿಜಯವಾಣಿ ಜೂನ್ 30 ಹಾಗೂ ಜುಲೈ 25ರಂದು ಸಮಗ್ರ ವರದಿ ಪ್ರಕಟಿಸಿ ಅಧಿಕಾರಿಗಳನ್ನು ಎಚ್ಚರಿಸಿತ್ತು.
ಕುಸಿಯುತ್ತಿರುವ ಗುಡ್ಡ ಪ್ರದೇಶದಲ್ಲಿ ಸಂಚಾರ ನಿಷೇಧಿಸಿದ್ದು, ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸುವ ಮೂಲಕ ಗುರುವಾರವೇ ತಡೆಗೋಡೆ ಕಾಮಗಾರಿಗೆ ಮುಂದಾಗಿದ್ದಾರೆ. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರ ಕಂಪನಿ ನೀಡಿದ್ದು, ಗುಡ್ಡೆ ಕುಸಿತ ಹಾಗೂ ವಿದ್ಯುತ್ ಟವರ್ ಉರುಳುವ ಭೀತಿಗೆ ಮುಕ್ತಿ ಸಿಕ್ಕಂತಾಗಿದೆ.
ಸಾಣೂರು ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಮಳೆ ಸ್ವಲ್ಪ ಕಡಿಮೆಯಾದ ಕೂಡಲೇ ಕಾಮಗಾರಿಗೆ ವೇಗ ನೀಡಿ ತಿಂಗಳೊಳಗೆ ಸುಸಜ್ಜಿತ ತಡೆಗೋಡೆ ನಿರ್ಮಾಣ ಮುಗಿಸಿಕೊಡುತ್ತೇವೆ.
-ಬಾಲಾಜಿ, ಗುತ್ತಿಗೆ ಸಂಸ್ಥೆಯ ಮ್ಯಾನೇಜರ್
ಸಾಣೂರು ಪಂಚಾಯಿತಿ ಆಡಳಿತ ಹಾಗೂ ಗ್ರಾಮಸ್ಥರ ಒಂದು ವರ್ಷಗಳ ಸುಧೀರ್ಘಾವಧಿಯ ಸಂಘಟಿತ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ವರದಿ ಬಳಿಕ ಎಚ್ಚೆತ್ತ ಗುತ್ತಿಗೆದಾರರು ಕಾಮಗಾರಿಗೆ ಮುಂದಾಗಿದ್ದಾರೆ.
-ಸಾಣೂರು ನರಸಿಂಹ ಕಾಮತ್, ಹೋರಾಟ ಸಮಿತಿ ಮುಖಂಡ