ಸಾಂದರ್ಭಿಕ ಚಿತ್ರ 
ಜಿಲ್ಲೆ

ಮೇಲಧಿಕಾರಿಗಳ ಕಿರುಕುಳಕ್ಕೆ ನೊಂದು ನೌಕರ ಆತ್ಮಹತ್ಯೆ; ಸಾಯಲು ಆ ಮೂವರೇ ಕಾರಣ...

Webdesk - Ravikanth

ಮಂಗಳೂರು: ಮೇಲಧಿಕಾರಿಗಳ ಕಿರುಕುಳಕ್ಕೆ ನೊಂದು ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯಲು ಆ ಮೂವರೇ ಕಾರಣ ಎಂಬ ಆರೋಪವನ್ನೂ ಹೊರಿಸಲಾಗಿದೆ. ಕೆಎಸ್​ಆರ್​ಟಿಸಿ ಮಂಗಳೂರು ವಿಭಾಗದ ಮೂರನೇ ಘಟಕದ ಚಾಲಕ ಕಂ ನಿರ್ವಾಹಕ ನಿಂಗಪ್ಪ ನೇಣು ಹಾಕಿಕೊಂಡ ನೌಕರ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮವಡಗಿ ಗ್ರಾಮದ ನಿಂಗಪ್ಪ ಕೆಎಸ್​ಆರ್​ಟಿಸಿ ಮಂಗಳೂರು ಘಟಕದಲ್ಲಿ ಕರ್ತವ್ಯದಲ್ಲಿದ್ದು, ಮಂಗಳೂರಿನ ಕುಂಟಿಕಾನ ಬಳಿಯ ಬಾಡಿಗೆ ‌ಮನೆಯೊಂದರಲ್ಲಿ ವಾಸವಿದ್ದರು. ಬಸ್ ತೆಗೆಯುವ ವಿಚಾರದಲ್ಲಿ ನಿರ್ಲಕ್ಷ್ಯ ಆರೋಪ ಹೊರಿಸಿ ನಿಂಗಪ್ಪ ಅವರನ್ನು ಕೆಲವು ದಿನಗಳ ಹಿಂದೆ ಅಮಾನತು ಮಾಡಲಾಗಿತ್ತು. ಹೀಗೆ ಅಮಾನತಾದ ಬಳಿಕ ನಿಂಗಪ್ಪ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅವರು ಸಾಯಲು ಮೇಲಧಿಕಾರಿಗಳ ಕಿರುಕುಳವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಕೆಎಸ್​ಆರ್​​ಟಿಸಿ ಟಿಸಿ ನಂದಕುಮಾರ್, ಡಿಟಿಒ ಕಮಲಾಕರ್ ಹಾಗೂ ಕೆಎಸ್​ಆರ್​​ಟಿಸಿ ಡಿಸಿ ಅರುಣ್ ಕುಮಾರ್ ಅವರ ಕಿರುಕುಳವೇ ಸಾಯಲು ಪ್ರಮುಖ ಕಾರಣ ಎಂದು ಈ ಮೂವರ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಉರ್ವ ಪೊಲೀಸ್​ ಠಾಣೆ ಎದುರು ಶವ ಇಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ ಸಂಬಂಧಿಕರು, ಈ ಮೂವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.