ಕಿನ್ನಿಗೋಳಿ: ಕೃಷ್ಣನ ವೇಷ ಧರಿಸಿದಾಗ ಮಕ್ಕಳು ತೋರಿಸುವ ಸೃಜನಶೀಲತೆ, ಕಲಾತ್ಮಕತೆ ಹಾಗೂ ನೈಜ ಭಾವ ನಮ್ಮಲ್ಲಿ ಶ್ರೀಕೃಷ್ಣನ ಬಾಲ್ಯಲೀಲೆ ನೆನಪಿಗೆ ತರುತ್ತವೆ. ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಮನಸ್ಸಿನಲ್ಲಿ ಮೌಲ್ಯಗಳನ್ನು ಬೆಳೆಸುವುದರ ಜತೆಗೆ ಬಾಲಗೋಪಾಲರ ನಗುಮುಖ, ಅವರ ಸರಳತೆ ಮತ್ತು ಮಧುರ ನಟನೆ ಇಂದಿನ ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಮಕ್ಕಳಿಂದ ಜೀವಂತವಾಗಲಿದೆ ಎಂದು ಉಡುಪಿ ಉಜ್ವಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಅಜಯ್ ಪುರುಷೋತ್ತಮ ಶೆಟ್ಟಿ ಹೇಳಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಮಧುರ ಕೃಷ್ಣ 2025 ಮುಕ್ತ ಕೃಷ್ಣ ವೇಷಧಾರಣಾ ಸ್ಪರ್ಧೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಿಮಂತೂರಿನ ಶ್ರೀ ಶಾರದಾ ಸೊಸೈಟಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಲ್ಕಿ ಉದ್ಯಮಿ ಶ್ರೀಕಾಂತ್ ಭಟ್ ಹೆಜಮಾಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಮನ, ಶಿಮಂತೂರಿನ ಶ್ರೀ ಶಾರದಾ ಸೊಸೈಟಿ ಕಾರ್ಯದರ್ಶಿ ಪುರಂದರ ಡಿ.ಶೆಟ್ಟಿಗಾರ್, ನಿರ್ದೇಶಕ ಸುರೇಶ್ ರಾವ್ ನಿರಳಿಕೆ, ಪಟೇಲ್ ವಾಸುದೇವ ರಾವ್, ಪಟೇಲ್ ವಿಶ್ವನಾಥ್ ರಾವ್ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಾಚಾರ್ಯ ಜಿತೇಂದ್ರ ವಿ.ರಾವ್ ಹೆಜಮಾಡಿ ವಂದಿಸಿದರು. ಸಹ ಶಿಕ್ಷಕಿ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು. ಮಧುರ ಕೃಷ್ಣ ಮುಕ್ತ ಕೃಷ್ಣ ವೇಷಧಾರಣಾ ಸ್ಪರ್ಧೆಯಲ್ಲಿ 125ಕ್ಕೂ ಅಧಿಕ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದಾರೆ.
ವಿದ್ಯಾರ್ಥಿಗಳ ಕಲಾಭಿವ್ಯಕ್ತಿ, ಧಾರ್ಮಿಕ ಭಾವನೆ ಮತ್ತು ಸಾಂಸ್ಕೃತಿಕ ಕೌಶಲ ವಿಕಸಿಸುವ ದಾರಿಗೆ ಮಹತ್ತರ ಹೆಜ್ಜೆಯಾಗಿದೆ. ವಿಜಯ ಅಥವಾ ಸೋಲು ಮುಖ್ಯವಲ್ಲ, ಈ ಪಾವನ ದಿನದಂದು ಕೃಷ್ಣನ ವೇಷ ಧರಿಸುವುದೇ ಒಂದು ಆಧ್ಯಾತ್ಮಿಕ ಅನುಭವ.
ಡಾ.ಹರಿಕೃಷ್ಣ ಪುನರೂರು
ಶಿಮಂತೂರಿನ ಶ್ರೀ ಶಾರದಾ ಸೊಸೈಟಿ ಅಧ್ಯಕ್ಷ ಧರ್ಮದರ್ಶಿ