ದೇವರ ಗದ್ದೆಯ ಸಮೀಪವಿರುವ ಭಂಡಾರಿ ಮಜಲಿಗೆ ಶ್ರೀದೇವರು ಆಗಮಿಸುತ್ತಿರುವುದು. 
ಜಿಲ್ಲೆ

ವಿಶಿಷ್ಟ ಪದ್ಧತಿಯ ಕೋರಿ ಜಾತ್ರೆ : ಇಂದು ಕೊಕ್ಕಡದಲ್ಲಿ ಉತ್ಸವ 2.55 ಎಕರೆ ಗದ್ದೆಯಲ್ಲಿ ನಡೆಯುವ ಕಾರ್ಯಕ್ರಮ

ಸೌಮ್ಯ ಆರ್

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳದ ಇತಿಹಾಸ ಪ್ರಸಿದ್ಧ ಕೋರಿ ಜಾತ್ರೆ ಧನುರ್ಮಾಸದ ಮೊದಲ ದಿನವಾದ ಡಿ.17ರಂದು ದೇವಳದ ವಿಶಾಲವಾದ 2.55 ಎಕರೆ ಗದ್ದೆಯಲ್ಲಿ ನಡೆಯಲಿದೆ. ಚೆನ್ನಾಗಿ ಉಳುಮೆ ಮಾಡಿ ಗದ್ದೆಯನ್ನು ಕೋರುವುದಕ್ಕೆ ಕೋರಿ ಎಂಬ ಹೆಸರು. ಕೊಕ್ಕಡ ದೇವಳದ ಗದ್ದೆಯಲ್ಲಿ ನಡೆಯುವ ಕೋರಿ ಕಡೆಯ ಕೋರಿ ಆಗಿದ್ದು, ಇದರ ಬಳಿಕ ಕೊಕ್ಕಡದ ಊರಿನಲ್ಲಿ ಕೋರಿ ನಡೆಸುವ ಹಾಗಿಲ್ಲ ಎಂಬುದು ವಾಡಿಕೆ.

ಕೋರಿ ಜಾತ್ರೆಯ ಮುನ್ನಾ ದಿನ ಅಂದರೆ ಧನು ಸಂಕ್ರಮಣದಂದು ಸಂಜೆ ದೇವಳದಲ್ಲಿ ಒಸಗೆಯ ಕಾರ್ಯಕ್ರಮ ನಡೆಯುತ್ತದೆ. ದೇವರ ಪೂಜೆಯಾದ ನಂತರ ಪ್ರಧಾನ ಅರ್ಚಕರು ಮತ್ತು ಭಕ್ತರು ವಾದ್ಯಘೋಷದೊಂದಿಗೆ ದೇವಳದ ಗದ್ದೆಗೆ ಹೋಗುತ್ತಾರೆ. ನಂಬೀಶರು ಗದ್ದೆಯ ಮಣ್ಣನ್ನು ರಾಶಿ ಮಾಡಿ ಅದಕ್ಕೆ ದೊಂದಿ ಇಟ್ಟ ಬಳಿಕ ಪವಿತ್ರಪಾಣಿಯವರು ಹಾಲು ಹಾಕುತ್ತಾರೆ. ಬಳಿಕ ನಲಿಕೆಯವರ ಪಾಡ್ದನದೊಂದಿಗೆ ಸಂಪ್ರದಾಯದಂತೆ ಮಲೆಕುಡಿಯ ಜನಾಂಗದವರು ದೊಂದಿ ಹಿಡಿದುಕೊಂಡು ಗದ್ದೆಗೆ ಒಂದು ಸುತ್ತು ಬಂದು ಗದ್ದೆಯ ಸುತ್ತಲೂ ದೊಂದಿಯನ್ನು ಇಟ್ಟು ಬರುವುದು ಪದ್ಧತಿ.

ಕೊಕ್ಕಡ ದೇವಾಲಯದಿಂದ 1 ಕಿ.ಮೀ. ಉತ್ತರಕ್ಕೆ ಕೊಕ್ಕಡ ಬೈಲು ಇದ್ದು, ಇದರ ಮುಂದೆ ಉತ್ತರಕ್ಕೆ ಶ್ರೀ ದೇವರ ತಿಮಾರು ಎಂಬ ವಿಸ್ತಾರವಾದ ಬಯಲು ಗದ್ದೆಯಲ್ಲಿ ವೈದ್ಯನಾಥೇಶ್ವರ ದೇವಳಕ್ಕೆ ಸೇರಿದ ಗದ್ದೆ ಇದೆ. ಕೋರಿ ಜಾತ್ರೆಯ ಮುಂಜಾನೆ ಕೋರಿಗದ್ದೆಗೆ ಸೊಪ್ಪು (ಎಂಜಿರ್ ಸೊಪ್ಪು) ಹಾಕುವ ಸಂಪ್ರದಾಯವಿದೆ. ಭಕ್ತರು ವ್ಯಾಧಿ ನಿವಾರಣೆಗೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಸೊಪ್ಪು ಹೊತ್ತುಕೊಂಡು ಬಂದು ಗದ್ದೆಗೆ ಹಾಕಿ ಗದ್ದೆಯ ಮಣ್ಣನ್ನು ಪ್ರಸಾದದಂತೆ ಹಚ್ಚಿಕೊಳ್ಳುತ್ತಾರೆ.

ದೇವಳದಲ್ಲಿ ಗಣಹೋಮ, ಏಕಾದಶ ರುದ್ರ ಸಂಪನ್ನಗೊಳ್ಳುತ್ತದೆ.ಮಹಾಪೂಜೆ ಮುಗಿಯುವ ಸಮಯಕ್ಕೆ ಭಂಡಾರಿ ಮನೆತನದ ಎತ್ತನ್ನು ದೇವಳಕ್ಕೆ ವಾದ್ಯ ವಾಲಗದೊಂದಿಗೆ ಕರೆತರಲಾಗುತ್ತದೆ. ಅಲ್ಲಿಂದ ಮೆರವಣಿಗೆಯ ಮೂಲಕ ಎತ್ತುಗಳು ಕೋರಿಗದ್ದೆಗೆ ಸಾಗುತ್ತವೆ. ಅಲ್ಲಿ ಸ್ಥಳದ ದೈವ ಸಾನ್ನಿಧ್ಯಕ್ಕೆ ಪ್ರಾರ್ಥನೆ ಸಲ್ಲಿಸಿ ಈ ಎತ್ತುಗಳನ್ನು ಮೊದಲು ಗದ್ದೆಗಿಳಿಸುವುದು ಪದ್ಧತಿ. ಭಕ್ತರು ಇಷ್ಟಾರ್ಥ ನೆರವೇರಿಸಿಕೊಳ್ಳಲು ಎತ್ತು ಅಥವಾ ಕೋಣಗಳನ್ನು ಕೋರಿಗದ್ದೆಗೆ ಇಳಿಸುತ್ತಾರೆ. ಬಳಿಕ ಹರಕೆಯ ರೂಪದಲ್ಲಿ ಬಂದಿರುವ ಎತ್ತುಗಳು ದೇವರ ಗದ್ದೆಗೆ ಇಳಿದು ಗದ್ದೆಯ ಒಂದು ಬದಿಯಿದ ಮತ್ತೊಂದು ಬದಿಗೆ ಸಾಗಿ ಹರಕೆ ಸಲ್ಲಿಸಲಾಗುತ್ತದೆ.

ಸಂಜೆ ದೇವಳದಲ್ಲಿ ದೇವರ ಸವಾರಿ ಹೊರಟು ತಂತ್ರಿಗಳ ನೇತೃತ್ವದಲ್ಲಿ ಕೋರಿಗದ್ದೆಯ ಹತ್ತಿರ ಮೆರವಣಿಗೆ ಹೋಗುವರು. ಭಂಡಾರಿಗಳ ಮಜಲಲ್ಲಿ ಮಡಿವಾಳ ಜನಾಂಗ ಒಗೆದು ಮಡಿ ಮಾಡಿದ ಬಿಳಿ ಬಟ್ಟೆಯನ್ನು ಹಾಸಿ ಸಿದ್ಧಗೊಳಿಸುತ್ತಾರೆ. ಈ ಬಟ್ಟೆಯ ಮೇಲೆ ಶ್ರೀ ವೈದ್ಯನಾಥೇಶ್ವರ ಮತ್ತು ಶ್ರೀ ವಿಷ್ಣುಮೂರ್ತಿ ದೇವರನ್ನು ಹೊತ್ತುಕೊಂಡವರು ನಡೆಯುತ್ತಾ ಭಂಡಾರಿ ಮಜಲಿನಲ್ಲಿರುವ ಕಟ್ಟೆಯಲ್ಲಿ ಮಡಿ ಬಟ್ಟೆ ಹಾಸಿ ಇಟ್ಟ ಪೀಠದಲ್ಲಿ ಉತ್ಸವಮೂರ್ತಿಗಳನ್ನು ಇರಿಸುವರು. ಬಳಿಕ ತಂತ್ರಿಗಳು ನಲಿಕೆಯವರು ದೇವಳದ ಅರ್ಚಕರು ವಾದ್ಯಗೋಷ್ಠಿಯೊಂದಿಗೆ ಗದ್ದೆಗೆ ಮೆರವಣಿಗೆ ಹೋಗುವರು.

ದೇವರ ಗದ್ದೆಗೆ ಭಕ್ತರು ಸೊಪ್ಪು (ಎಂಜಿರ್) ಹಾಕಿ ಪುನೀತರಾಗುವುದು.
ಭಂಡಾರಿ ಮಜಲಿನಲ್ಲಿ ಇರುವ ಕಟ್ಟೆಯಲ್ಲಿ ಶ್ರೀ ವೈದ್ಯನಾಥೇಶ್ವರ ಮತ್ತು ವಿಷ್ಣುಮೂರ್ತಿ ದೇವರ ಉತ್ಸವ ಮೂರ್ತಿ

ಬೃಹತ್ ಪೂಕರೆ

ಕೋರಿ ಜಾತ್ರೆಯ ದಿನ ಪೂಕರೆ ಎಂಬ ಸುಮಾರು ಹದಿನೈದು ಅಡಿ ಎತ್ತರದ ಅಲಂಕೃತ ಕಂಬವನ್ನು ನಿಲ್ಲಿಸಲಾಗುತ್ತದೆ. ಗದ್ದೆಯ ಪಕ್ಕದಲ್ಲೇ ನಾಗಬನವಿದೆ. ಭಂಡಾರಿಗಳ ಮಜಲಲ್ಲಿ ದೇವರು ಕುಳಿತುಕೊಳ್ಳುವ ಕಟ್ಟೆಯಲ್ಲಿ ದೇವರಿಗೆ ಪೂಜೆ ನಡೆಯುತ್ತದೆ. ಬಳಿಕ ನಾಲ್ವಿಕೆಯವರಿಗೆ ಮತ್ತು ಪವಿತ್ರಪಾಣಿಗಳಿಗೆ ಕೊಟ್ಟಾರಿ ವಂಶಸ್ಥರ ಹಿರಿಯರೊಬ್ಬರು ಉಗ್ರಾಣದ ಕಟ್ಟುಕಾಯಿ ತಂದು ನೀಡುವರು. ಇದು ಗೌರವ ಸೂಚಕವಾಗಿದೆ. ಮೆರವಣಿಗೆ ದೇವಾಲಯಕ್ಕೆ ಬಂದು ಉತ್ಸವ ನಡೆದು, ದೇವರು ಗರ್ಭಗೃಹದೊಳಗೆ ಪ್ರವೇಶಿಸುವ ಮೂಲಕ ಕೋರಿ ಜಾತ್ರೆ ಸಂಪನ್ನಗೊಳ್ಳುತ್ತದೆ.