ಕಿನ್ನಿಗೋಳಿ: ಕೊಡೆತ್ತೂರು ಗುತ್ತಿನಲ್ಲಿ ಕೊಡೆತ್ತೂರು ಗುತ್ತು ಕುಟುಂಬಿಕರು ಆರಾಧಿಸುವ ಶ್ರೀಮೂಲ ಮೈಸಂದಾಯ, ಶ್ರೀ ಕೊಡಮಣಿತ್ತಾಯ, ಶ್ರೀ ಕಾಂತೇರಿ ಧೂಮಾವತಿ ಬಂಟ ಮತ್ತು ಶ್ರೀ ಸತ್ಯದೇವತೆ ದೈವಗಳ ಪುನಃಪ್ರತಿಷ್ಠಾಪನಾ ಕಲಶಾಭಿಷೇಕ ಶುಕ್ರವಾರ ನಡೆಯಿತು.
ದೇವಸ್ಯ ಮತ್ತು ಕೊಡೆತ್ತೂರು ಗುತ್ತು ಮನೆತನದ ನಿತಿನ್ ಶೆಟ್ಟಿ ಅವರಿಗೆ, ಶ್ರೀ ಕೊಡಮಣಿತ್ತಾಯ ಹಾಗೂ ಶ್ರೀ ಕಾಂತೇರಿ ಧೂಮಾವತಿ ದೈವಗಳ ದರ್ಶನದ ಅನುಗ್ರಹದೊಂದಿಗೆ, ರಾಜನ್ ದೈವ ಶ್ರೀ ಕೋಡಮಣಿತ್ತಾಯ ದೈವದ ಗಡಿ ಪ್ರಧಾನ ಕಾರ್ಯಕ್ರಮ ಕೊಡೆತ್ತೂರು ಗುತ್ತಿನ ಧರ್ಮ ಚಾವಡಿಯಲ್ಲಿ ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ನಡೆಯಿತು.
ದೇವಸ್ಯ ಮಠದ ಕೆ.ವೇದವ್ಯಾಸ ಉಡುಪ, ಅತ್ತೂರು ಬೈಲು ವೆಂಕಟರಾಜ ಉಡುಪ, ಶಿಬರೂರು ರಾಮಕೃಷ್ಣ ಶಿಬರಾಯ, ದೈವಜ್ಞ ಶಶಿಕುಮಾರ್ ಪಂಡಿತ್ ಹಾಗೂ ಪ್ರಮುಖ ಗಡಿಪ್ರಧಾನರ ಉಪಸ್ಥಿತಿಯಲ್ಲಿ, ಅತ್ತೂರು ಕೊಡೆತ್ತೂರು ಮಾಗಣೆಯ ಮನೆತನದ ಮುಖ್ಯಸ್ಥರ ಸಮ್ಮುಖದಲ್ಲಿ ಗಡಿಪ್ರದಾನಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ.ರೈ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕೊಡೆತ್ತೂರು ಗುತ್ತು ದಾಮೋದರ ಭಂಡಾರಿ ಉಪಸ್ಥಿತರಿದ್ದರು.