ಶಿರ್ವ: ವಿದ್ಯಾರ್ಥಿಗಳಿಗೆ ಕಾಲೇಜಿನ ಪಠ್ಯ ಚಟುವಟಿಯ ಜೊತೆಗೆ ಜ್ಞಾನದ ವೃದ್ಧಿಗಾಗಿ ಜೀವನಕ್ಕೆ ಬೇಕಾಗಿರುವ ಒಳ್ಳೆಯ ವಿಚಾರವನ್ನು ನೀಡಬಲ್ಲ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾನೀಯ. ಜ್ಞಾನಾಮೃತದ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡ ವಿದ್ಯಾರ್ಥಿಗಳ ಬದುಕಿನಲ್ಲಿ ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯವಿದೆ ಎಂದು ಶಿರ್ವ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಹಿಂದು ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕ ಸಮಿತಿ ಅಧ್ಯಕ್ಷ ಎಸ್.ನಿತ್ಯಾನಂದ ಹೆಗ್ಡೆ ಹೇಳಿದರು.
ಶಿರ್ವ ಹಿಂದು ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾದ ಜ್ಞಾನಾಮೃತ ಸರಣಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ವಿದ್ಯಾವರ್ಧಕ ಸಂದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಬದಲಾವಣೆಗೆ ಹೊಂದಿಕೊಳ್ಳುವುದರ ಜತೆಗೆ ಸಂಪೂರ್ಣವಾಗಿ ವೈಜ್ಞಾನಿಕ ಉಪಕರಣಗಳ ಮೇಲೆ ಅವಲಂಬಿತರಾಗದೇ ತಮ್ಮಲ್ಲಿರುವ ಸಾಮರ್ಥ್ಯದಿಂದ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.
ಜೆಸಿಐ ತರಬೇತುದಾರೆ ಡಾ.ಹರಿಣಾಕ್ಷಿ ಕರ್ಕೇರ, ಮಣಿಪಾಲ ಎಂಐಟಿಯ ವರುಣ್ ಪ್ರಭು, ಜೆಸಿಐ ವಲಯ ತರಬೇತುದಾರೆ ಪ್ರೀತಿ ಶೆಟ್ಟಿಗಾರ್, ಶಿಕ್ಷಣ ತಜ್ಞ ಜಯಪ್ರಕಾಶ್ ರಾವ್, ಬೆಳ್ಮಣ್ ಜೆಸಿಐ ಅಧ್ಯಕ್ಷ ಪ್ರದೀಪ್ ಶೆಟ್ಟಿ, ವಿದ್ಯಾವರ್ಧಕ ಆಂಗ್ಲ ವಾಧ್ಯಮ ಶಾಲೆ ಪ್ರಾಂಶುಪಾಲೆ ಡಾ.ಸಹನಾ ಹೆಗ್ಡೆ, ಜ್ಞಾನಚೇತನಾ ಟ್ರಸ್ಟ್‌ನ ಟ್ರಸ್ಟಿ ಸತೀಶ್ ಶೆಟ್ಟಿ, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪಾಲಕರು, ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಜ್ಞಾನಚೇತನಾ ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಅಕಾಡೆಮಿಕ್ ಡೀನ್ ಗುರುಪ್ರಸಾದ್ ವಂದಿಸಿದರು. ಉಪನ್ಯಾಸಕಿ ನಿಶಿತಾ ನಿರೂಪಿಸಿದರು.