ಶಿರೂರಲ್ಲಿ ತ್ಯಾಜ್ಯ ವಿಲೇವಾರಿಯದ್ದೇ ವರಿ

BYN-May17-2- Shirur Dumping Yard
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ತಾಲೂಕಿನ ಶಿರೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ನಡುವಿನ ಜಟಾಪಟಿಯಿಂದಾಗಿ ತ್ಯಾಜ್ಯ ವಿಲೇವಾರಿ ಟಕಕ್ಕೆ ಸ್ಥಳ ಮಂಜೂರಾಗದೆ ರಸ್ತೆ ಇಕ್ಕೆಲಗಳಲ್ಲಿ ರಾಶಿ ರಾಶಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ.

ಜಿಲ್ಲೆಯ ಅತೀ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಶಿರೂರಿನದ್ದಾಗಿದೆ. ಬಹುದೊಡ್ಡ ಗ್ರಾಮವಾಗಿರುವ ಕಾರಣ ಪಂಚಾಯಿತಿ ಹಾಗೂ ಸ್ಥಳೀಯರು ಮತ್ತು ದಾನಿಗಳ ನೆರವಿನಿಂದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರಂತರ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯಲ್ಲಿ ಹತ್ತು ವರ್ಷಗಳ ಹಿಂದೆ ಸ್ವಚ್ಛ ಶಿರೂರು ಪರಿಕಲ್ಪನೆಯಲ್ಲಿ ಎಂಎಂ ಫೌಂಡೇಶನ್‌ಕಸ ಸಾಗಾಟ ವಾಹನವನ್ನು ಕೊಡುಗೆಯಾಗಿ ನೀಡಿತ್ತು. 8 ವರ್ಷಗಳಿಂದ ಕಸ ವಿಲೇವಾರಿಗಾಗಿ ಪಂಚಾಯಿತಿಯಿಂದ ಅನತಿ ದೂರದಲ್ಲಿರುವ ಸಾವಂತಗುಡ್ಡೆ ಸರ್ವೆ ನಂಬರ್ 81ರಲ್ಲಿ 2.5 ಎಕರೆ ಜಾಗ ನಿಗದಿಪಡಿಸಲಾಗಿತ್ತು. ಆದರೆ ಅಧಿಕೃತ ದಾಖಲೆ ಇಲ್ಲದ ಕಾರಣ ಕಸ ವಿಲೇವಾರಿ ಘಟಕ ಸ್ಥಾಪಿಸಲು ಸಾಧ್ಯವಾಗಿಲ್ಲ. ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಸಂಪೂರ್ಣ ಕಡತ ಸಿದ್ಧಗೊಳಿಸಿ ಜಿಲ್ಲಾಡಳಿತಕ್ಕೆ ಕಳುಹಿಸಿದ್ದರು. ಇತ್ತೀಚೆಗೆ ಶಿರೂರಿಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಪಿಡಿಒಗೆ ಸೂಚಿಸಿದ್ದರು.

ಸಮನ್ವಯತೆ ಕೊರತೆ

ಅರಣ್ಯ ಇಲಾಖೆ ಈ ಜಾಗ ತಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದರಿಂದ ಪ್ರತ್ಯೇಕ ಜಂಟಿ ಸರ್ವೇ ವಾಡಲಾಗಿತ್ತು. ಪ್ರಸ್ತುತ ಜಾಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಬೈಂದೂರು ವಲಯ ಅರಣ್ಯಾಧಿಕಾರಿಗಳ ತಂಡ ಸಂಪೂರ್ಣ ವರದಿ ಸಿದ್ಧಗೊಳಿಸಿ ಕಸ ವಿಲೇವಾರಿಗೆ ಗುರುತಿಸಿರುವ ಸ್ಥಳ ಅರಣ್ಯ ಇಲಾಖೆಗೆ ಸೇರಿದೆ ಎಂದು ನಮೂದಿಸಿದ್ದರು. ಇಲಾಖೆಗಳ ಸಮನ್ವಯತೆ ಕೊರತೆಯಿಂದಾಗಿ ಶಿರೂರಿನಲ್ಲಿ ಕಸ ವಿಲೇವಾರಿ ಟಕ ಸ್ಥಾಪನೆ ವಿಳಂಬವಾಗಿದೆ.

ಕಸ ವಿಲೇವಾರಿಗೆ ಸೂಕ್ತ ಜಾಗ ಇಲ್ಲದ ಕಾರಣ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು, ರಸ್ತೆ ಬದಿ ತ್ಯಾಜ್ಯ ರಾಶಿಯಿಂದ ತುಂಬಿದೆ. ಪಂಚಾಯಿತಿಗೆ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ತ್ಯಾಜ್ಯ ವಿಲೇವಾರಿಗೆ ಜಾಗ ನೀಡುವಂತೆ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪಂಚಾಯಿತಿ ಜಾಗವಾದ ಕಾರಣ ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಬೇಕು. ಕಸ ವಿಲೆವಾರಿ ಸಮಸ್ಯೆ ಇತ್ಯರ್ಥವಾಗಬೇಕಿದೆ. -ರಾಜೇಂದ್ರ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಿರೂರು https://www.vijayavani.net/gujjadi-government-school-alumni-association-silver-celebration https://www.vijayavani.net/yakshagana-performance-for-the-development-of-harkur-government-school

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net