ಕಾಂಗ್ರೆಸ್​ ಸರ್ಕಾರದಿಂದ ಅಭಿವೃದ್ಧಿ ಪರ್ವ...

Lavanya Lead
Published on

ಕೆಪಿಸಿಸಿ ಕಾರ್ಯದರ್ಶಿ ಲಾವಣ್ಯಾ ಬಲ್ಲಾಳ ಮಾಹಿತಿ

ಹೊಸಪೇಟೆಯಲ್ಲಿ ಮೇ 20ರಂದು ಸಾಧನಾ ಸಮಾವೇಶ

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ರಚನೆಯಾಗಿ 2 ವರ್ಷ ಪೂರ್ಣಗೊಂಡಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪರ್ವವೇ ನಡೆದಿದೆ. ಜನರ ನಿರೀಕ್ಷೆಗೂ ಮೀರಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ವಿರೋಧ ಪಕ್ಷ ಬಿಜೆಪಿ ನಾಯಕರ ಆರೋಪ, ಪ್ರಶ್ನೆಗಳಿಗೆ ಮೇ 20ರಂದು ಹೊಸಪೇಟೆಯಲ್ಲಿ ನಡೆಯಲಿರುವ ಪ್ರಗತಿಯತ್ತ ಕರ್ನಾಟಕ, ಸಮರ್ಪಣಾ ಸಂಕಲ್ಪ ಸಮಾವೇಶದಲ್ಲಿ ಉತ್ತರಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯದರ್ಶಿ, ಉಡುಪಿ ಜಿಲ್ಲಾ ಕಾಂಗ್ರೆಸ್​ ಉಸ್ತುವಾರಿ ಲಾವಣ್ಯಾ ಬಲ್ಲಾಳ ತಿಳಿಸಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಮೇ 19ರಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಎಲ್ಲವನ್ನೂ ಅನುಷ್ಠಾನ ಮಾಡಲಾಗಿದೆ. ಸರ್ಕಾರಕ್ಕೆ ಇನ್ನೂ ಮೂರು ವರ್ಷದ ಅವಧಿ ಬಾಕಿ ಇದ್ದು, ಅತ್ಯುತ್ತಮವಾಗಿ ಜನಸೇವೆ ಮಾಡಲಿದ್ದೇವೆ ಎಂದರು.

ದೇಶದಲ್ಲೇ ಕರ್ನಾಟಕ ಅಗ್ರಸ್ಥಾನ

Lavanya 2
ಕಾಂಗ್ರೆಸ್​ ಸರ್ಕಾರ ರಚನೆಯಾದ ಕೇವಲ 2 ವರ್ಷದ ಅವಧಿಯಲ್ಲಿ ಜಿಎಸ್​ಡಿಪಿ ಬೆಳವಣಿಗೆಯಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹ ಮತ್ತು ವಿದೇಶಿ ಬಂಡವಾಳ ಹೂಡಿಕೆಯಲ್ಲಿ 2ನೇ ಸ್ಥಾನದಲ್ಲಿದ್ದೇವೆ. ಕೇರ್​ ಎಡ್ಜ್​ ವರದಿ ಪ್ರಕಾರ ದೇಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ದೇಶದ ಒಟ್ಟಾರೆ ಜಿಡಿಪಿ ಶೇ.8.2ರಷ್ಟು ಇದ್ದರೆ, ಕರ್ನಾಟಕದ ಜಿಡಿಪಿ ಶೇ.10.2ರಷ್ಟು ಬೆಳವಣಿಗೆಯಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಆಮೂಲಾಗ್ರ ಅಭಿವೃದ್ಧಿಯಾಗಿದೆ ಎಂದರು.

ಮಾದರಿ ಯೋಜನೆ

ರಾಜ್ಯದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿಯಾಗಿದೆ. ಬಿಜೆಪಿ ಆಡಳಿತವಿರುವ ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಸಹ ನಮ್ಮ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿದ್ದಾರೆ. ಆದರೂ ಸಹ ರಾಜ್ಯ ಬಿಜೆಪಿಯವರು ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಆಗಾಗ ಅಪಸ್ವರ ಎತ್ತುತ್ತಾರೆ. ಗ್ಯಾರಂಟಿಯಿಂದ ಖಜಾನೆ ಖಾಲಿಯಾಗಿಲ್ಲ, ಜನರ ಜೇಬು ಭರ್ತಿಯಾಗುತ್ತಿದೆ ಎಂದರು.

ಪೌರಕಾರ್ಮಿಕರ ಕಾಯಮಾತಿ

Ashokkumar Kodavuru
ಜಿಲ್ಲಾಧ್ಯಕ್ಷ ಅಶೋಕಕುಮಾರ್​ ಕೊಡವೂರು ಮಾತನಾಡಿ, ಸಾರ್ವತ್ರಿಕ ಮೂಲ ಆದಾಯವನ್ನು ಹೇಗೆ ಹಂಚಿಕೆ ಮಾಡಬೇಕು ಎನ್ನುವುದಕ್ಕೆ ರಾಜ್ಯ ಕಾಂಗ್ರೆಸ್​ ಸರ್ಕಾರ ದೇಶಕ್ಕೆ ಮಾದರಿಯಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿದೆ. ರಾಜ್ಯದ ಸುಮಾರು 7.50 ಲಕ್ಷ ಪೌರಕಾರ್ಮಿಕರನ್ನು ಕಾಯಮಾತಿ ಮಾಡುವ ಕಾರ್ಯಕ್ಕೆ ಮೇ 1ರಿಂದಲೇ ಸರ್ಕಾರ ಚಾಲನೆ ನೀಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್​ ಉಪಾಧ್ಯಕ್ಷ ಮಹಾಬಲ ಕುಂದರ್​, ಉಡಪಿ ಜಿಲ್ಲಾ ಕಾಂಗ್ರೆಸ್​ ಕಾರ್ಯಾಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು, ಜಿಲ್ಲಾ ವಕ್ತಾರ ಬಿಪಿನ್​ಚಂದ್ರಪಾಲ ನಕ್ರೆ, ಉಡುಪಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ ಕಾಂಚನ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net