ಜಿಲ್ಲೆ

ಕಿಚ್ಚ ಸುದೀಪ್​ಗೆ ಅವಹೇಳನ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪೊಲೀಸರಿಗೆ ದೂರು..

Webdesk - Ravikanth

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್​ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ವಾಕ್ಸಮರಕ್ಕೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಪ್ರವೇಶ ಮಾಡಿದ್ದಷ್ಟೇ ಅಲ್ಲದೆ, ಪೊಲೀಸರಿಗೆ ದೂರನ್ನೂ ನೀಡಿದೆ.

ನಟ ಸುದೀಪ್ ರಮ್ಮಿ ಕುರಿತ ಜಾಹೀರಾತಲ್ಲಿ ಭಾಗಿಯಾಗಿದ್ದಕ್ಕೆ ಈ ಹಿಂದೆಯೇ ಲೇಖಕ ಅಹೋರಾತ್ರ ದನಿ ಎತ್ತಿದ್ದು, ಅದಕ್ಕೆ ಸುದೀಪ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದು, ಅವಾಚ್ಯವಾಗಿ ನಿಂದಿಸಿದ್ದು, ಬಳಿಕ ಅಹೋರಾತ್ರ ಪೊಲೀಸರಿಗೆ ದೂರು ನೀಡಿದಂಥ ಬೆಳವಣಿಗೆಗಳು ನಡೆದಿವೆ.

ಆ ಬಳಿಕ ಸ್ವಲ್ಪ ತಣ್ಣಗಾಗಿದ್ದಂಥ ಈ ಪ್ರಕರಣ ಕಳೆದ ಕೆಲವು ದಿನಗಳಿಂದ ಮತ್ತೆ ಮುನ್ನೆಲೆಗೆ ಬಂದಿದೆ. ರಮ್ಮಿ ಕುರಿತಂತೆ ಸುದೀಪ್​ ನಡೆಯನ್ನು ವಿರೋಧಿಸಿ ಚರಣ್ ಎಂಬಾತ ಕಳೆದ ಕೆಲವು ದಿನಗಳಿಂದ ಫೇಸ್​​ಬುಕ್​ನಲ್ಲಿ ಮೇಲಿಂದ ಮೇಲೆ ಲೈವ್ ಬಂದು ಮಾತನಾಡುತ್ತಿರುವುದು ನಡೆದಿದೆ. ಇದಕ್ಕೆ ಸುದೀಪ್ ಅಭಿಮಾನಿಗಳ ವಿರೋಧ, ಅವರಿಂದಲೂ ಲೈವ್, ಮತ್ತೆ ಅದಕ್ಕೆ ಚರಣ್ ಪ್ರತಿಕ್ರಿಯೆಯ ಲೈವ್ ಮುಂತಾದವು ನಡೆಯುತ್ತಲೇ ಇವೆ. ಈ ಮಧ್ಯೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಮಧ್ಯಪ್ರವೇಶಿಸಿದ್ದು, ಅಹೋರಾತ್ರ ಹಾಗೂ ಚರಣ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ಕುರಿತು ಅಹೋರಾತ್ರ ಮತ್ತು ಚರಣ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಆ ಮೂಲಕ ಸುದೀಪ್ ಘನತೆ- ಗೌರವಕ್ಕೆ ಚ್ಯುತಿ ತರುತ್ತಿರುವುದು ಬೇಸರದ ಸಂಗತಿ. ಇಂಥ ಹೇಳಿಕೆಗಳಿಂದ ಕನ್ನಡ ಚಿತ್ರರಂಗ ಮತ್ತು ಕಲಾವಿದರ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತದೆ. ಹೀಗಾಗಿ ಅಹೋರಾತ್ರ ಮತ್ತು ಚರಣ್ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.