ಜಿಲ್ಲೆ

5 ಎಕರೆ ಜಮೀನು ಇರುವವರು ಸಣ್ಣ ರೈತ : ಪರಿಗಣಿಸಲು ಕೆಯ್ಯೂರು ಗ್ರಾಪಂ ವಿಶೇಷ ಗ್ರಾಮಸಭೆಯಲ್ಲಿ ಆಗ್ರಹ

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಉದ್ಯೋಗ ಖಾತರಿ ಯೋಜನೆಯ ಸವಲತ್ತು ಪಡೆಯಲು ಅನುಕೂಲವಾಗುವಂತೆ 5 ಎಕರೆಯೊಳಗೆ ಜಮೀನು ಹೊಂದಿರುವ ಎಲ್ಲ ರೈತರನ್ನು ಸಣ್ಣ ರೈತರೆಂದು ಪರಿಗಣಿಸಿ ಅವರಿಗೆ ಸಣ್ಣ ರೈತ ದೃಢೀಕರಣ ಪತ್ರ ನೀಡಬೇಕು ಎಂಬ ಆಗ್ರಹ ಕೆಯ್ಯೂರು ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆಯಲ್ಲಿ ವ್ಯಕ್ತವಾಯಿತು.

ಕೆಯ್ಯೂರು ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅಧ್ಯಕ್ಷತೆಯಲ್ಲಿ ನಡೆಯಿತು.

ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಶ್ರೀ ಶೆಣೈ ನೋಡೆಲ್ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು.

ವಿಷಯ ಪ್ರಸ್ತಾಪಿಸಿದ ಜಯಂತ ಪೂಜಾರಿ ಕೆಂಗುಡೇಲು, ಈಗಾಗಲೇ ಸಣ್ಣ ರೈತ ಸರ್ಟಿಫಿಕೆಟ್ ಕೊಡುವ ವಿಚಾರದಲ್ಲಿ ಬಹಳಷ್ಟು ಗೊಂದಲವಿದ್ದು, ರೈತರು ಉದ್ಯೋಗ ಖಾತರಿ ಯೋಜನೆಯಿಂದ ಹೊರಗುಳಿಯುತ್ತಿದ್ದಾರೆ. ಹಾಗಾಗಿ 5 ಎಕರೆ ಜಮೀನು ಹೊಂದಿದ ಎಲ್ಲ ರೈತರನ್ನು ಸಣ್ಣ ರೈತ ಎಂದು ಪರಿಗಣಿಸಿ ಅವರಿಗೆ ಸರ್ಟಿಫಿಕೆಟ್ ಕೊಡುವಂತಾಗಬೇಕು. ಈ ಬಗ್ಗೆ ಸರ್ಕಾರಕ್ಕೆ ಬರೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸದಸ್ಯ ಅಬ್ದುಲ್ ಖಾದರ್ ಮೇರ್ಲ ಧ್ವನಿಗೂಡಿಸಿದರು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಮಾತನಾಡಿ, ಉದ್ಯೋಗ ಖಾತರಿ ಒಳ್ಳೆಯ ಯೋಜನೆಯಾಗಿದ್ದು, ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ನರೇಗಾ ಯೋಜನೆಯ ಸಂಯೋಜಕಿ ಸೌಮ್ಯ ಕುಮಾರಿ ವಿಷಯ ಮಂಡನೆ ಮಾಡಿದರು. ಐಇಸಿ ಕಾರ್ಯಕರ್ತ ಭರತ್‌ರಾಜ್, ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ತೋಟಗಾರಿಕಾ ಸಿವಿಲ್ ಇಂಜಿನಿಯರ್ ಆಕಾಂಕ್ಷ ರೈ, ಸಿವಿಲ್ ಇಂಜಿನಿಯರ್ ಶ್ರೀಲಕ್ಷ್ಮೀ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿದರು.

5993 ಮಾನವ ದಿನದ ಕೆಲಸ

ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಯಿಂದ 130 ಕಾಮಗಾರಿ, ತಾಲೂಕು ಪಂಚಾಯಿತಿನಿಂದ 4 ಕಾಮಗಾರಿ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಇಲಾಖೆಯಿಂದ 5 ಕಾಮಗಾರಿ ನಡೆದಿದೆ. 5993 ಮಾನವ ದಿನಗಳ ಕೆಲಸ ನಡೆದಿದ್ದು 18,84,923 ರೂ. ಕೂಲಿ ವೆಚ್ಚ, 3,81,195 ರೂ. ಸಾಮಾಗ್ರಿ ವೆಚ್ಚ ಸೇರಿದಂತೆ ಒಟ್ಟು 22,66,118 ರೂ. ಮೊತ್ತದ ಕಾಮಗಾರಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.