ಜಿಲ್ಲೆ

ಜುಲೈನಲ್ಲಿ ಕಾವೇರಿ 2.0 ಸಂಪೂರ್ಣ ಜಾರಿ: ಏಪ್ರಿಲ್, ಮೇ, ಜೂನ್‌ನಲ್ಲಿ ಎಲ್ಲೆಡೆ ಅನುಷ್ಠಾನ

Webdesk - Ravikanth

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿನ ಉಪ ನೋಂದಣಿ ಕಚೇರಿಗಳಲ್ಲಿ ಜೂ.30ರ ಒಳಗೆ ಕಾವೇರಿ 2.0 ತಂತ್ರಾಂಶ ಸಂಪೂರ್ಣ ಜಾರಿ ಮಾಡಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಯೋಜನೆ ರೂಪಿಸಿದೆ. ರಾಜ್ಯದ 292 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ಸಾಫ್ಟ್​ವೇರ್​ ಜಾರಿ ಕುರಿತು ದಿನಾಂಕ ನಿಗದಿ ಮಾಡಿದ್ದು, ಎರಡು ವಾರಗಳ ಕಾಲ ಪ್ರಯೋಗಿಕವಾಗಿ 35 ಜಿಲ್ಲೆಗಳಲ್ಲಿ (ಸಬ್ ರಿಜಿಸ್ಟ್ರಾರ್ ದಾಖಲೆಯಂತೆ) ಜೂನ್ ಅಂತ್ಯದವರೆಗೂ ಹಂತಹಂತವಾಗಿ ಜಾರಿಗೆ ತರಲಾಗುತ್ತದೆ. ಇದರಲ್ಲಿನ ಸಾಧನ-ಬಾಧಕಗಳನ್ನು ಅಧ್ಯಯನ ನಡೆಸಿ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೊಡ್ಡಬಳ್ಳಾಪುರ ಸಬ್ ರಿಜಿಸ್ಟ್ರಾರ್‌ನಲ್ಲಿ ಅಧಿಕೃತವಾಗಿ ಜಾರಿಗೆ ತರಲು ನಿರ್ಧರಿಸಲಾಗುತ್ತದೆ. ಈಗಾಗಲೆ ಪ್ರಯೋಗಿಕವಾಗಿ ಚಿಂಚೋಳಿ, ಬೆಳಗಾವಿ ಮತ್ತು ಮಂಡ್ಯ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಕೆ ಮಾಡಲಾಗಿದೆ. ಇದರ ಜತೆಗೆ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಿಫ್ಟ್​-ಶೌಚಗೃಹ ಸೇರಿ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಕಾವೇರಿ-2 ಹೊಸ ತಂತ್ರಾಂಶ ಸೇವೆಯಿಂದ ನೋಂದಣಿಗೆ ಬರುವ ಜನರು ಸಮಯ ನಿಗದಿ ಮಾಡಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ಕೆಲವೇ ನಿಮಿಷಗಳಲ್ಲಿ ಸೇವೆ ಪಡೆಯಬಹುದು. ಪಾಸ್‌ಪೋರ್ಟ್ ಸೇವೆ ಮಾದರಿ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಜುಲೈನಲ್ಲಿ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ಜಾರಿಗೆ ತರಬೇಕೆಂಬ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಪಣತೊಟ್ಟಿದ್ದಾರೆ.

ಅತ್ಯಂತ ಸರಳ ಸಾಫ್ಟ್​ವೇರ್ ಜುಲೈನಲ್ಲಿ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಜಾರಿಗೆ ತರಲಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿ, ಸಿಬ್ಬಂದಿ, ವಕೀಲರು, ಸಾರ್ವಜನಿಕರು ಸೇರಿದಂತೆ ಸಂಬಂಧಪಟ್ಟವರಿಗೆ ಹಂತ ಹಂತವಾಗಿ ಕಾರ್ಯಾಗಾರ ನಡೆಸಿ ಕಾವೇರಿ 2.0 ಕುರಿತು ಅರಿವು ಮೂಡಿಸಲಾಗುತ್ತದೆ. ಹೊಸ ಸೇವೆ ಆರಂಭದಲ್ಲಿ ಕಷ್ಟ ಎನಿಸಿದರೂ ಇದು ಮೊದಲಿಗಿಂತ ಜನಸ್ನೇಹಿ ಸೇವೆಯಾಗಿದೆ. ಪ್ರತಿಯೊಬ್ಬರು ಸಹಕರಿಸಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತೆ ಡಾ.ಬಿ.ಆರ್. ಮಮತಾ ತಿಳಿಸಿದ್ದಾರೆ.
ರಾಜ್ಯವ್ಯಾಪಿ ಕಾವೇರಿ 2.0 ತಂತ್ರಾಂಶ ಜಾರಿ ------------------------------- ಜಿಲ್ಲೆ: ಅನುಷ್ಠಾನ ------------------------------- ಚಿಕ್ಕಬಳ್ಳಾಪುರ: ಏ.1ರಿಂದ 18 ರಾಮನಗರ: ಏ.12ರಿಂದ 21 ಕೋಲಾರ: ಏ.17ರಿಂದ ಮೇ 2 ದಾವಣಗೆರೆ: ಏ.25ರಿಂದ ಮೇ 3 ಬೆಂ.ಗ್ರಾಮಾಂತರ: ಮೇ 2ರಿಂದ 12 ಚಿತ್ರದುರ್ಗ: ಮೇ 6ರಿಂದ 19 ಶಿವಮೊಗ್ಗ: ಮೇ 15ರಿಂದ 29 ತುಮಕೂರು: ಮೇ 23ರಿಂದ 30 ಬಸವನಗುಡಿ: ಮೇ 29ರಿಂದ ಜೂ.5 ಗಾಂಧಿನಗರ: ಜೂ.1ರಿಂದ 6 ಜಯನಗರ: ಜೂ.5ರಿಂದ 12 ರಾಜಾಜಿನಗರ: ಜೂ.9ರಿಂದ 16 ಶಿವಾಜಿನಗರ: ಜೂ.14ರಿಂದ 20 ಮಂಡ್ಯ: ಏ.1ರಿಂದ 20 ಚಾಮರಾಜನಗರ: ಏ.13ರಿಂದ 27 ಕೊಡಗು: ಏ.21ರಿಂದ ಮೇ 4 ಚಿಕ್ಕಮಗಳೂರು: ಏ.28ರಿಂದ ಮೇ 12 ಮೈಸೂರು: ಮೇ 8ರಿಂದ 31 ಹಾಸನ: ಮೇ 25ರಿಂದ ಜೂ.21 ಉಡುಪಿ: ಜೂ. 7ರಿಂದ 21 ದಕ್ಷಿಣಕನ್ನಡ: ಜೂ. 15ರಿಂದ ಜು. 3 ಕಲುಬುರಗಿ: ಏ. 1ರಿಂದ 17 ಯಾದಗಿರಿ: ಏ. 12ರಿಂದ 21 ಬೀದರ್: ಏ. 18ರಿಂದ 29 ಕೊಪ್ಪಳ: ಏ. 25ರಿಂದ ಮೇ 6 ರಾಯಚೂರು: ಮೇ 2 ರಿಂದ 11 ಬಳ್ಳಾರಿ: ಮೇ 8ರಿಂದ 22 ವಿಜಯನಗರ: ಮೇ 16ರಿಂದ 26 ಬೆಳಗಾವಿ: ಏ. 1 ರಿಂದ 24 ವಿಜಯಪುರ: ಏ. 18ರಿಂದ 29 ಕಾರವಾರ: ಏ. 25ರಿಂದ ಮೇ 12 ಧಾರವಾಡ: ಮೇ 8ರಿಂದ ಮೇ 22 ಗದಗ: ಮೇ 17ರಿಂದ ಜೂ. 1 ಹಾವೇರಿ: ಮೇ 25ರಿಂದ ಜೂ. 8 ಬಾಗಲಕೋಟೆ: ಜೂ. 3ರಿಂದ 21