ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಅಂಡರ್‌ಪಾಸ್ ಕಾಮಗಾರಿಯನ್ನು ನವೆಂಬರ್ ಮೊದಲ ವಾರದಲ್ಲಿ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಎನ್‌ಎಚ್‌ಎಐ ಇಲಾಖೆ ಅಧಿಕಾರಿಗಳೊಂದಿಗೆ ಕಟಪಾಡಿ ಜಂಕ್ಷನ್ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಯೋಜನೆ ಪರಿಶೀಲಿಸಿ, ಮಾತನಾಡಿದರು.
ಆರಂಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮ ಭಾಗದ ಒಂದು ಪಥದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಆ ವೇಳೆ ಸರ್ವೀಸ್ ರಸ್ತೆಯನ್ನು ಅಗಲಗೊಳಿಸಲಾಗುತ್ತದೆ. ಉಡುಪಿ ಭಾಗಕ್ಕೆ ತೆರಳುವ ಸರ್ವೀಸ್ ಬಸ್‌ಗಳನ್ನು ಹಳೆ ಎಂಬಿಸಿ ರಸ್ತೆಯಲ್ಲಿ ಸಂಚರಿಸುವಂತೆ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಕಿನ್ನಿಮುಲ್ಕಿ, ಕಲ್ಯಾಣಪುರ ಭಾಗಕ್ಕಿಂತ ವಾಹನ ದಟ್ಟಣೆ ಅಧಿಕವಾಗಿರುವ ಕಟಪಾಡಿಯನ್ನು ಗಮನದಲ್ಲಿರಿಸಿ ಸುವ್ಯವಸ್ಥಿತವಾಗಿ ಕಾಮಗಾರಿ ಪೂರೈಸಲು ಸರ್ವರ ಸಹಕಾರ ಕೋರಲಾಗುತ್ತದೆ ಎಂದರು.
ಮಂಗಳೂರು-ಉಡುಪಿ-ಕುಂದಾಪುರ ಸಂಪರ್ಕದ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರ ಪಥ ಬದಲಾಯಿಸುವ ಬಗ್ಗೆ ಕಟಪಾಡಿ-ಶಿರ್ವ ಸಂಪರ್ಕ ರಸ್ತೆಯ ಬಗ್ಗೆ ಸವಾಲೋಚನೆ ನಡೆಸಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಾತನಾಡಿ, ಅಧಿಕ ವಾಹನ ದಟ್ಟಣೆ ಇರುವ ಕಟಪಾಡಿ ಎಂಬುದನ್ನು ಗಮನದಲ್ಲಿರಿಸಿ ವ್ಯವಸ್ಥಿತವಾಗಿ ಕಾಮಗಾರಿಯನ್ನು ನಡೆಸಲಾಗುತ್ತದೆ. ನವೆಂಬರ್ ಮೊದಲ ವಾರದಲ್ಲಿ ಕಾಮಗಾರಿ ಆರಂಭಿಸುವಲ್ಲಿ ಸೂಚನೆ ನೀಡಲಾಗಿದೆ. ಮಳೆ ನಿಲ್ಲದಿದ್ದಲ್ಲಿ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಎಎಸ್ಪಿ ಸುಧಾಕರ ನಾಯ್ಕ, ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್, ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಜಿಪಂ ವಾಜಿ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಪಿಡಿಒ ತಿಲಕ್‌ರಾಜ್, ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.