ಜಿಲ್ಲೆ

VIDEO| ರಸ್ತೆಗುಂಡಿ ಪರಿಶೀಲಿಸಿದ ಯಮಧರ್ಮ; ಪ್ರೇತಗಳಿಗೆ ನೀಡಿದ ಶಿಕ್ಷೆ ಏನು ಗೊತ್ತಾ?

ಉಡುಪಿ: ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ರಾಜ್ಯದ ಹಲವೆಡೆ ರಸ್ತೆಗಳು ಗುಂಡಿ ಬಿದ್ದಿವೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಗ್ರಾಮೀಣ ರಸ್ತೆಗಳು ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳಲ್ಲೂ ಗುಂಡಿಗಳು ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರ ಪಾಲಿಗೆ ಯಮಸ್ವರೂಪಿಯಾಗಿ ಮಾರ್ಪಟ್ಟಿವೆ. ಸಾರ್ವಜನಿಕರ ಜೀವ ಅಪಾಯದಲ್ಲಿದ್ದರೂ ಸಹ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದಕ್ಕೆ ತಲೆಕೆಡಿಸಿಕೊಳ್ಳದೇ ಇರುವುದು ಬೇಸರದ ಸಂಗತಿಯಾಗಿದ್ದು, ಇದೀಗ ಇದಕ್ಕೆ ಸಂಬಂಧಿಸಿದಂತೆ ಯಮರಾಜ ಮತ್ತು ಚಿತ್ರಗುಪ್ತ ವೇಷಧಾರಿಗಳು ಲಾಂಗ್‌ ಜಂಪ್‌ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ರಸ್ತೆಗಳ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ವೇಳೆ ಗುಂಡಿ ಬಿದ್ದಿದ್ದ ರಸ್ತೆಗಳ ಮಧ್ಯೆ ನಿಂತು ಪ್ರೇತ, ಯಮರಾಜ ಮತ್ತು ಚಿತ್ರಗುಪ್ತ ವೇಷಧಾರಿಗಳು ಲಾಂಗ್‌ ಜಂಪ್‌ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ರಸ್ತೆಗಳ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಕೈಯಲ್ಲಿ ಅಳತೆ ಟೇಪ್​ಅನ್ನು ಇಟ್ಟುಕೊಂಡಿರುವ ಯಮ ಹಾಗೂ ಚಿತ್ರಗುಪ್ತನ ವೇಷಧಾರಿಗಳು ಅವುಗಳಿಂದ ಲಾಂಗ್​ ಜಂಪ್​ ಮಾಡಿಸುತ್ತಾರೆ. ಗುಂಡಿಗಳನ್ನು ದಾಟಿ ಪ್ರೇತಗಳು ಹಾರಿದ ತಕ್ಷಣ ಅದನ್ನು ಯಮರಾಜ ಹಾಗೂ ಚಿತ್ರಗುಪ್ತ ಅಳತೆ ತೆಗೆದುಕೊಂಡು ಬರೆದುಕೊಳ್ಳುತ್ತಾರೆ. ಕರ್ನಾಟಕದ ಉಡುಪಿಯಲ್ಲಿ ಪ್ರೇತಗಳಿಗೆ ಲಾಂಗ್‌ ಜಂಪ್‌ ಸ್ಪರ್ಧೆ ಏರ್ಪಡಿಸಿದ ಯಮರಾಜ ಎಂಬ ಶೀರ್ಷಿಕೆಯನ್ನು ಸಹ ವಿಡಿಯೋಗೆ ನೀಡಲಾಗಿದೆ.

ಆಗಸ್ಟ್​ರ 27ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.7 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ರಸ್ತೆ ಗುಂಡಿಗಳು ಹಾಗೂ ಅದರಿಂದಾಗುವ ಅಪಾಯಗಳ ಬಗ್ಗೆ ಕಮೆಂಟ್​ಗಳ ಮೂಲಕ ಜನರು ಧ್ವನಿ ಎತ್ತಿದ್ದಾರೆ. ತಮಾಷೆಯಾಗಿಯೇ ಅದ್ಭುತವಾಗಿ ಸಮಸ್ಯೆಗಳ ಬಗ್ಗೆ ವಿವರಿಸಿದ್ದೀರಿ ಎಂದು ಕಮೆಂಟ್​ ಹಾಕಿದ್ದಾರೆ.