ಜಿಲ್ಲೆ

ನಾಳೆ ಸೈಕ್ಲೋನ್​ ಆರ್ಭಟ: ರಾಜ್ಯದಲ್ಲಿ ಇನ್ನು ಎಷ್ಟು ದಿನ ಮಳೆ ಅಬ್ಬರಿಸಲಿದೆ? ಹವಾಮಾನ ಇಲಾಖೆ ಮುನ್ಸೂಚನೆ ಏನು? Karnataka Rain Updates

Karnataka Rain Updates : ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಭಾನುವಾರ ರಾತ್ರಿಯಿಡೀ ಸುರಿದ ಭಾರಿ ಮಳೆ, ರಾಜಧಾನಿ ಬೆಂಗಳೂರಲ್ಲಿ ದಾಖಲೆಯ ಜತೆಗೆ ಭಾರಿ ಅವಾಂತರವನ್ನು ಸೃಷ್ಟಿಸಿದೆ. ಸಾಲದು ಎಂಬಂತೆ ಸೋಮವಾರ ಕೂಡ ರಾತ್ರಿಯಿಡೀ ಮಳೆ ಸುರಿದಿದೆ. ಹೇಳಬೇಕೆಂದರೆ, ಇನ್ನು ಸುರಿಯುತ್ತಲೇ ಇದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ವರುಣ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆ ಯಾವಾಗ ನಿಲ್ಲತ್ತದೆ ಎಂದು ಎದುರು ನೋಡುತ್ತಿದ್ದಾರೆ. ಬೆಂಗಳೂರು ಮಂದಿಯಂತೂ ಸಾಕಪ್ಪ ಈ ಮಳೆ ಸಹವಾಸ ಎನ್ನುತ್ತಿದ್ದಾರೆ. ಇದರ ಮಧ್ಯೆ ಈಗಾಗಲೇ ಮಳೆಯಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಐಪಿಎಲ್​ ಪಂದ್ಯವೊಂದು ರದ್ದಾಗಿದೆ. ಇದೀಗ ಎರಡನೇ ಪಂದ್ಯಕ್ಕೂ ಮಳೆ ಭೀತಿ ಇರುವುದಿಂದ ಕ್ರೀಡಾಭಿಮಾನಿಗಳು ಕೂಡ ಯಾವಾಗ ಮಳೆ ನಿಲ್ಲುತ್ತದೆ ಎಂದು ಕಾಯುತ್ತಿದ್ದಾರೆ. ಹಾಗಾದರೆ, ಇನ್ನು ಎಷ್ಟು ದಿನ ರಾಜ್ಯದಲ್ಲಿ ಮಳೆಯಾಗಬಹುದು? ಹವಾಮಾನ ಇಲಾಖೆ ಏನು ಹೇಳಿದೆ ಅನ್ನೋದನ್ನ ನಾವೀಗ ತಿಳಿದುಕೊಳ್ಳೋಣ.

ಹವಾಮಾನ ಇಲಾಖೆ ವರದಿಯ ಪ್ರಕಾರ, ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯಾದ್ಯಂತ ಮುಂದಿನ 3 ದಿನಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗಲಿದೆ. ಅದರಲ್ಲೂ ಬುಧವಾರ (ಮೇ 21) ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಸೈಕ್ಲೋನ್ ಪ್ರಭಾವದಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮೇ 21ರಿಂದ ಮುಂದಿನ 2 ದಿನ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಇಲಾಖೆ, ರೆಡ್ ಅಲರ್ಟ್ ಕೊಟ್ಟಿದೆ.

ಧಾರವಾಡ, ಹಾವೇರಿ, ಕೊಡಗು, ಹಾಸನದಲ್ಲಿ ಮುಂದಿನ 2 ದಿನ ಬಿರುಸಾಗಿ ವರ್ಷಧಾರೆಯಾಗುವುದರಿಂದ ಆರೆಂಜ್ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ. ಚಿತ್ರದುರ್ಗ ಮತ್ತು ದಾವಣಗೆರೆಯಲಿಯ್ಲೂ ಮೇ 22ರಂದು ಆರೆಂಜ್ ಅಲರ್ಟ್ ಇರಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಗದಗ, ಕೊಪ್ಪಳ ಮತ್ತು ವಿಜಯಪುರದಲ್ಲಿ ಮುಂದಿನ 2 ದಿನ ಯೆಲ್ಲೋ ಅಲರ್ಟ್ ಇರಲಿದೆ.

ಇನ್ನು ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ. ನಾಳೆ ಸೈಕ್ಲೋನ್​ ಆರ್ಭಟ ಸಾಧ್ಯತೆ ಇದ್ದು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ತಲೆದೂರುವ ಸಾಧ್ಯತೆ ಇದೆ. ಹೀಗಾಗಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಆದಷ್ಟು ಮನೆಯಿಂದ ಹೊರಬರುವುದನ್ನು ತಪ್ಪಿಸಿ ಮತ್ತು ವಿದ್ಯುತ್​ ಕಂಬಗಳನ್ನು ಸ್ಪರ್ಶಿಸಬೇಡಿ. ಇನ್ನು ಯಾವುದೇ ಕಾರಣಕ್ಕೂ ಮಳೆಯ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲಬೇಡಿ. ರಸ್ತೆಗಳಲ್ಲಿ ಸಂಚರಿಸುವಾಗ ಆದಷ್ಟು ಜಾಗರೂಕರಾಗಿರಿ.

ಆರ್​ಸಿಬಿ​ ಪಂದ್ಯಕ್ಕೂ ಮಳೆ ಭೀತಿ

ಮೇ 23ರಂದು ಆರ್​ಸಿಬಿ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮಳೆ ಭೀತಿ ಕಾಡುತ್ತಿದೆ. ಮೇ 17 ರಂದು ಕೆಕೆಆರ್​ ಮತ್ತು ಆರ್​ಸಿಬಿ ನಡುವೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಲೇ ರದ್ದಾಯಿತು. ಇದರಿಂದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಯಿತು. ಇದೀಗ ಇನ್ನು ಮೂರು ದಿನ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಮೇ 23ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಭೀತಿ ಇದೆ. ಹೀಗಾಗಿ ಅಭಿಮಾನಿಗಳು ಮಳೆಯಾಗದಿರಲಿ ಎಂದು ದೇವರನ್ನು ಪ್ರಾರ್ಥಿಸುತ್ತಿದ್ದಾರೆ.

ಉಷ್ಣಾಂಶ 4-5 ಡಿ.ಸೆ. ಇಳಿಮುಖ

ಮಳೆ ಆರ್ಭಟದಿಂದಾಗಿ ಉತ್ತರ ಕರ್ನಾಟಕ ವ್ಯಾಪ್ತಿಯ ಬಹುತೇಕ ಜಿಲ್ಲೆಗಳಲ್ಲಿ 40 ಡಿ.ಸೆ. ಅಸುಪಾಸಿನಲ್ಲಿ ದಾಖಲಾಗುತ್ತಿದ್ದ ಉಷ್ಣಾಂಶ 32-34 ಡಿ.ಸೆ.ಗೆ ಅಂದರೆ ವಾಡಿಕೆಗಿಂತ 4-5 ಡಿ.ಸೆ.ಇಳಿಮುಖವಾಗಿದೆ. ದಕ್ಷಿಣ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 30 ಡಿ.ಸೆ.ಒಳಗಿದೆ.

ಮೂರು ಸಾವು

ಭಾನುವಾರ ತಡರಾತ್ರಿ 3 ಗಂಟೆ ಅವಧಿಯಲ್ಲಿ ಸುರಿದ 132 ಮಿಮೀ ಮಳೆಗೆ ಜನಜೀವನ ತತ್ತರಿಸುವಂತೆ ಮಾಡಿದೆ. ಹತ್ತಾರು ಬಡಾವಣೆಗಳು ಜಲಾವೃತವಾದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡಿದರು. 2 ಪ್ರತ್ಯೇಕ ಮಳೆ ಸಂಬಂಧಿ ಅವಘಡಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮಹದೇವಪುರದಲ್ಲಿ ಖಾಸಗಿ ಕಂಪನಿಯ ಕಾಂಪೌಂಡ್ ಕುಸಿದು ಶಶಿಕಲಾ (35) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಾಲರ್ಸ್ ಕಾಲೋನಿ, ಎನ್​ಎಸ್ ಪಾಳ್ಯದ ಮಧುವನ ಅಪಾರ್ಟ್​ವೆುಂಟ್​ನಲ್ಲಿ ಮಳೆ ನೀರು ಸ್ವಚ್ಛಗೊಳಿಸುವ ವೇಳೆ ಮನಮೋಹನ್ ಕಾಮತ್ ಹಾಗೂ ನೇಪಾಳ ಮೂಲದ ದಿನೇಶ್ ಎಂಬ ಬಾಲಕ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.