

Bengaluru Rain: ಕಳೆದ ವರ್ಷ ಒಂದು ಹನಿ ಮಳೆ ಇಲ್ಲದೆ ಕುಡಿಯುವ ನೀರಿಗೂ ಪರದಾಡಿದ್ದ ಬೆಂಗಳೂರು ಮಂದಿ ಆಕಾಶ ನೋಡಿ ಶಪಿಸುತ್ತಿದ್ದರು. ಆದರೆ, ಈ ವರ್ಷ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಳೆರಾಯ ಉದ್ಯಾನ ನಗರಿಯಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದ್ದು, ಮತ್ತದೇ ಬೆಂಗಳೂರು ಮಂದಿ ಆಕಾಶ ನೋಡಿ ಶಪಿಸುವಂತಾಗಿದೆ.
ಮೊನ್ನೆ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ನಗರದಲ್ಲಿ ಉಂಟಾಗಿರುವ ಅಸ್ತವ್ಯಸ್ತದಿಂದ ಬೆಂಗಳೂರು ಮಂದಿ ಇನ್ನೂ ಸುಧಾರಿಸಿಕೊಂಡಿಲ್ಲ. ಇದೀಗ ನಿನ್ನೆ ರಾತ್ರಿಯಿಡೀ ಮತ್ತೆ ವರುಣ ಅಬ್ಬರಿಸಿದ್ದು ಸಿಲಿಕಾನ್ ಸಿಟಿ ಮಂದಿಯ ಬದುಕು ಹೈರಾಣವಾಗಿದೆ.
ಬೆಂಗಳೂರು ನಗರದ ಎಲ್ಲ ಭಾಗಗಳಲ್ಲೂ ವರುಣ ಅಬ್ಬರ ಮುಂದುವರಿದಿದೆ. ಆಕಾಶ ತೂತು ಬಿದ್ದಂತೆ ಇಡೀ ರಾತ್ರಿ ಮಳೆ ಸುರಿಯುತ್ತಲೇ ಇದೆ. ಮುಂಜಾನೆ ಆದರೆ ಸಾಕು ನಿಲ್ಲುತ್ತಿದ್ದ ಮಳೆರಾಯ ಇಂದು ಮುಂಜಾನೆ ಆದರೂ ತನ್ನ ಆರ್ಭಟವನ್ನು ಮುಂದುವರಿಸಿದ್ದಾನೆ. ಇದರಿಂದ ಅನೇಕ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ. ಮುಂಜಾನೆ ಎದ್ದು ಮಾರುಕಟ್ಟೆಗಳಿಗೆ ತೆರಳುತ್ತಿದ್ದ ಜನರು ಮಳೆಯಿಂದಾಗಿ ಪರದಾಡುತ್ತಿದ್ದಾರೆ. ಇದರಿಂದ ದಿನದ ವಹಿವಾಟುವಿನಲ್ಲಿ ಅಡಚಣೆ ಉಂಟಾಗಲಿದೆ. ಇನ್ನು ಬೆಳಗಿನ ಪಾಳಿಯಲ್ಲಿ ಕೆಲಸ ಮಾಡುವವರು ಸರಿಯಾದ ಸಮಯಕ್ಕೆ ಆಫೀಸ್ಗೆ ತಲುಪಲಾಗದೇ ಮಳೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.
ಭಾರಿ ಮಳೆಯಿಂದ ನಗರದ ಹಲವೆಡೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ರಸ್ತೆಗಳು ಜಲಾವೃತಗೊಂಡಿದ್ದು, ಎಲ್ಲಿ ಗುಂಡಿಗಳಿವೆ? ಮತ್ತು ಮ್ಯಾನ್ ಹೋಲ್ಗಳು ಬಲಿಗಾಗಿ ಎಲ್ಲಿ ಬಾಯ್ತೆರೆದಿವೆ ಎಂಬುದು ತಿಳಿಯದೇ ರಸ್ತೆಯಲ್ಲಿ ಸಂಚರಿಸಲು ಜನರು ಭಯಪಡುವಂತಾಗಿದೆ. ಇನ್ನು ಭಾರಿ ಮಳೆಗೆ ಮರಗಳು ಬೀಳುವ ಭೀತಿಯಿದ್ದು, ರಸ್ತೆಯಲ್ಲಿ ಓಡಾಡುವಾಗಲೂ ಭಯದಿಂದಲೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ.
ರಾಜಧಾನಿಯ ತಗ್ಗು ಪ್ರದೇಶಗಳಂತೂ ಕರೆಯಂತಾಗಿದ್ದು ಜನರು ಮನೆಯಿಂದ ಹೊರಬರಲಾಗದೇ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಳೆರಾಯನ ಆರ್ಭಟ ಇದೇ ರೀತಿ ಮುಂದುವರಿದರೆ, ಬೆಂಗಳೂರು ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಜನರ ಪರಿಸ್ಥಿತಿ ಈಗಾಗಲೇ ಚಿಂತಾಜನಕವಾಗಿದೆ. ನಿರಂತರವಾಗಿ ಮಳೆ ಬರುತ್ತಲೇ ಇದ್ದು, ನೀರಿನ ಪ್ರಮಾಣ ಕಡಿಮೆಯಾಗದೇ, ಮನೆಗಳಿಂದ ನೀರನ್ನು ತೆರವುಗೊಳಿಸಲು ಪರದಾಡುತ್ತಿದ್ದಾರೆ. ಮಳೆರಾಯನನ್ನೇ ಜನರು ಶಪಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಮುಂದಿನ 2 ದಿನಗಳ ಕಾಲ ಭಾರಿ ಮಳೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಐಟಿ ಉದ್ಯೋಗಿಗಳ ಹಿತದೃಷ್ಟಿಯಿಂದ ಮನೆಯಿಂದಲೇ ಕೆಲಸ ಮಾಡಲು ಕೆಲವು ಕಂಪನಿಗಳು ಸೂಚಿಸಿವೆ. ಸಾಧ್ಯವಾದ್ರೆ ಆಫೀಸಿಗೆ ಹಾಜರಾಗಬಹುದು, ಇಲ್ಲವಾದಲ್ಲಿ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.
ಭಾನುವಾರ ತಡರಾತ್ರಿ 3 ಗಂಟೆ ಅವಧಿಯಲ್ಲಿ ಸುರಿದ 132 ಮಿಮೀ ಮಳೆಗೆ ಜನಜೀವನ ತತ್ತರಿಸುವಂತೆ ಮಾಡಿದೆ. ಹತ್ತಾರು ಬಡಾವಣೆಗಳು ಜಲಾವೃತವಾದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡಿದರು. 2 ಪ್ರತ್ಯೇಕ ಮಳೆ ಸಂಬಂಧಿ ಅವಘಡಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮಹದೇವಪುರದಲ್ಲಿ ಖಾಸಗಿ ಕಂಪನಿಯ ಕಾಂಪೌಂಡ್ ಕುಸಿದು ಶಶಿಕಲಾ (35) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಾಲರ್ಸ್ ಕಾಲೋನಿ, ಎನ್ಎಸ್ ಪಾಳ್ಯದ ಮಧುವನ ಅಪಾರ್ಟ್ವೆುಂಟ್ನಲ್ಲಿ ಮಳೆ ನೀರು ಸ್ವಚ್ಛಗೊಳಿಸುವ ವೇಳೆ ಮನಮೋಹನ್ ಕಾಮತ್ ಹಾಗೂ ನೇಪಾಳ ಮೂಲದ ದಿನೇಶ್ ಎಂಬ ಬಾಲಕ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಭಾನುವಾರ ತಡರಾತ್ರಿ ಆರಂಭವಾದ ಮಳೆ ಸೋಮವಾರ ಬೆಳಗಿನ ಜಾವದವರೆಗೆ ಬಿಟ್ಟೂ ಬಿಡದೆ ಸುರಿಯಿತು. ಬಳಿಕ ಮಧ್ಯಾಹ್ನದವರೆಗೆ ವಿಶ್ರಾಂತಿ ನೀಡಿದ್ದ ಮಳೆರಾಯ ಸಂಜೆ ಸತತ 3-4 ಗಂಟೆ ಅಬ್ಬರಿಸಿದ್ದಾನೆ. ಇದರಿಂದಾಗಿ ರಸ್ತೆ, ಬಡಾವಣೆಗಳು, ಅಂಡರ್ಪಾಸ್, ಜಂಕ್ಷನ್ಗಳು ಜಲಾವೃತಗೊಂಡಿದ್ದವು. ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬೆಳಕಿಲ್ಲದೆ ನಿವಾಸಿಗಳಿಗೆ ತೊಂದರೆಯಾಯಿತು. ಕೆಲವೆಡೆ ಮಳೆ ನೀರು ರಭಸವಾಗಿ ಹರಿದಿದ್ದರಿಂದ ವಾಹನಗಳು ಮುಳುಗಿದವು. ಮಳೆಗೆ ಹೊಂಡ-ಗುಂಡಿ ಕಾಣದೆ ವಾಹನ ಸವಾರರು ಹೈರಾಣಾದರು. ನಗರದ ಪ್ರಮುಖ ರಸ್ತೆಗಳಲ್ಲಿ 2-3 ಅಡಿ ನೀರು ನಿಂತಿದ್ದರಿಂದ ಕಚೇರಿಗಳಿಗೆ ತೆರಳುತ್ತಿದ್ದವರು ಪರದಾಡುವಂತಾಯಿತು. ಬೈಕ್, ಆಟೋ ಇಂಜಿನ್ಗಳಲ್ಲಿ ನೀರು ಹೊಕ್ಕು ನಡುರಸ್ತೆಯಲ್ಲೇ ಕೆಟ್ಟು ನಿಂತವು. ಗೊರಗುಂಟೆಪಾಳ್ಯ, ಸಿಲ್ಕ್ಬೋರ್ಡ್, ಯಶವಂತಪುರ, 8ನೇ ಮೈಲಿ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಹೆಚ್ಚು ವಾಹನದಟ್ಟಣೆ ಉಂಟಾಯಿತು. ರಸ್ತೆಗಳಲ್ಲಿ ಭೋರ್ಗರೆಯುತ್ತಿರುವ ನೀರಿನಲ್ಲೇ ವಾಹನಗಳು ಸಂಚರಿಸುತ್ತಿದ್ದವು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಳೆಗೆ ಕಾರಣವೇನು?: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಬುಧವಾರ (ಮೇ 21) ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಬುಧವಾರ (ಮೇ 21) ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಸೈಕ್ಲೋನ್ ಪ್ರಭಾವದಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮೇ 21ರಿಂದ ಮುಂದಿನ 2 ದಿನ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಇಲಾಖೆ, ರೆಡ್ ಅಲರ್ಟ್ ಕೊಟ್ಟಿದೆ.
ಧಾರವಾಡ, ಹಾವೇರಿ, ಕೊಡಗು, ಹಾಸನದಲ್ಲಿ ಮುಂದಿನ 2 ದಿನ ಬಿರುಸಾಗಿ ವರ್ಷಧಾರೆಯಾಗುವುದರಿಂದ ಆರೆಂಜ್ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ. ಚಿತ್ರದುರ್ಗ ಮತ್ತು ದಾವಣಗೆರೆಯಲಿಯ್ಲೂ ಮೇ 22ರಂದು ಆರೆಂಜ್ ಅಲರ್ಟ್ ಇರಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಗದಗ, ಕೊಪ್ಪಳ ಮತ್ತು ವಿಜಯಪುರದಲ್ಲಿ ಮುಂದಿನ 2 ದಿನ ಯೆಲ್ಲೋ ಅಲರ್ಟ್ ಇರಲಿದೆ.
ಮಳೆ ಆರ್ಭಟದಿಂದಾಗಿ ಉತ್ತರ ಕರ್ನಾಟಕ ವ್ಯಾಪ್ತಿಯ ಬಹುತೇಕ ಜಿಲ್ಲೆಗಳಲ್ಲಿ 40 ಡಿ.ಸೆ. ಅಸುಪಾಸಿನಲ್ಲಿ ದಾಖಲಾಗುತ್ತಿದ್ದ ಉಷ್ಣಾಂಶ 32-34 ಡಿ.ಸೆ.ಗೆ ಅಂದರೆ ವಾಡಿಕೆಗಿಂತ 4-5 ಡಿ.ಸೆ.ಇಳಿಮುಖವಾಗಿದೆ. ದಕ್ಷಿಣ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 30 ಡಿ.ಸೆ.ಒಳಗಿದೆ.
* 132 ಮಿ.ಮೀ ಕೆಂಗೇರಿ
* 103 ಮಿ.ಮೀ ಚೌಡೇಶ್ವರಿ ನಗರ
* 96 ಮಿ.ಮೀ ಕೋರಮಂಗಲ
* 93 ಮಿ.ಮೀ ಎಚ್ಎಎಲ್
* 89 ಮಿ.ಮೀ ಬಾಗಲಗುಂಟೆ
* 89 ಮಿ.ಮೀ ಕಾಟನ್ಪೇಟೆ
* 85 ಮಿ.ಮೀ ಬಾಣಸವಾಡಿ
* 73 ಮಿ.ಮೀ. ಎಚ್ಚೆಸ್ಸಾರ್ ಲೇಔಟ್
ಅರಕೇರಾ (ರಾಯಚೂರು): ತಾಲೂಕಿನ ಭೋಗಿರಾಮನಗುಂಡ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಕುರಿಗಾಹಿ ಮೃತಪಟ್ಟಿದ್ದಾನೆ. ಹನುಮಗೌಡ ಬಾಲಪ್ಪ ನಾಯಕ ಮುದಕಿ (16) ಮೃತ. ಗ್ರಾಮದ ಹೊರ ವಲಯದ ಶಂಕರಬಂಡಿ ಹೊಲದಲ್ಲಿ ಕುರಿ ಮೇಯಿಸುತ್ತಿರುವಾಗ ಗಾಳಿ ಮಳೆ ಆರಂಭವಾಗಿದೆ. ತಕ್ಷಣವೇ ಕುರಿಗಳನ್ನು ಒಂದು ಕಡೆ ಕೂಡಿ ಹಾಕುತ್ತಿರುವ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.