ಕಾರ್ಕಳ: ಸಾಹಿತ್ಯ ಕ್ಷೇತ್ರಕ್ಕೆ ಕಾರ್ಕಳ ಕೊಟ್ಟ ಕೊಡುಗೆ ಅಪಾರ. ಅಪಾರ ಸಾಂಸ್ಕೃತಿಕ ಹಿನ್ನೆಲೆಯನ್ನು ಕಾರ್ಕಳ ತಾಲೂಕು ಹೊಂದಿದೆ. ನಮ್ಮ ತಾಲೂಕಿನ ಹಿರಿಮೆ ಗರಿಮೆಯ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ರಾಷ್ಟ್ರೀಯ ತರಬೇತುದಾರ ಕೆ.ರಾಜೇಂದ್ರ ಭಟ್ ಹೇಳಿದರು.
ಸಾಹಿತ್ಯ ಸಮ್ಮೇಳದಲ್ಲಿ ಸಾಂಸ್ಕೃತಿಕ ಹಿರಿಮೆ ಎಂಬ ವಿಚಾರದ ಕುರಿತು ಅವರು ಮಾತನಾಡಿದರು. ಬಳಿಕ ಕಾರ್ಕಳ ಸಾಹಿತ್ಯದ ಹಿರಿಮೆ ಹಾಗೂ ಸಾಧಕರ ಬಗ್ಗೆ ಮಾಹಿತಿ ನೀಡಿದರು.
ಸಾಂಸ್ಕೃತಿಕ ಚಿಂತಕ ಪ್ರೊ.ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಯಶೋಧರ ಚರಿತ್ರೆ, ಪ್ರಣಯ ಕಾವ್ಯ ಎಂದು ಪ್ರಸಿದ್ದಿ ಪಡೆದಿದ್ದರೂ ಅದು ಸಂಪೂರ್ಣ ಧಾರ್ಮಿಕ ಕಾವ್ಯ ಎಂದರು.
ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತ್ಯ ವಾರಧಿ, ಸಾಹಿತ್ಯ ಸಂಸ್ಕೃತಿ, ಸಾಹಿತ್ಯ ಮಂಥನ ಎಂಬ ಮೂರು ವಿಭಾಗದಲ್ಲಿ ಗೋಷ್ಠಿಗಳು ನಡೆಯಿತು.
ಸಮನ್ವಯಕಾರರಾಗಿದ್ದ ಸಾಂಸ್ಕೃತಿಕ ಚಿಂತಕಿ ಮಿತ್ರಪ್ರಭಾ ಹೆಗ್ಡೆ ಶುಭಹಾರೈಸಿದರು. ಸಾಹಿತ್ಯ ಮಂಥನಗೋಷ್ಠಿಯಲ್ಲಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಾಯಕ ಕಾಮತ್, ವಲಯ ಅರಣ್ಯಾಧಿಕಾರಿ ಶಶಿಧರ್ ಗೌಡ, ತೋಟಗಾರಿಕೆ ಇಲಾಖೆಯ ಶ್ರೀನಿವಾಸ ಬಿ.ವಿ, ಯುವ ಸಾಹಿತಿ ರಾಜೇಶ್ ಕುಮಾರ್ ಕಲ್ಯಾ, ಕಾರ್ಕಳ ಬಸ್ ಏಜೆಂಟರ ಬಳಗ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮ್ಮದ್ ಭಾಗವಹಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದರು. ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.