ಜಿಲ್ಲೆ

ಚಿತ್ರ ನಿರ್ಮಾಪಕ, ಉದ್ಯಮಿ ಕಪಾಲಿ ಮೋಹನ್​ ಆತ್ಮಹತ್ಯೆಗೆ ಶರಣು

ಕುಂದಾಪುರ: ಚಿತ್ರ ನಿರ್ಮಾಪಕ, ಉದ್ಯಮಿ ವಿ.ಕೆ.ಮೋಹನ್ ಅಲಿಯಾಸ್​ ಕಪಾಲಿ ಮೋಹನ್ ಭಾನುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿನಿಮಾ ನಿರ್ಮಾಪಕ, ವಿತರಕ ಹಾಗೂ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಮೋಹನ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ವಕ್ವಾಡಿಯವರು. ಮೋಹನ್ ಪೀಣ್ಯ ಬಳಿಯಲ್ಲಿರುವ ಫಾರ್ಮ್ ಹೌಸ್​ನಲ್ಲಿ ನೇಣಿಗೆ ಶರಣಾಗಿದ್ದಾರೆ.

ಡಾ.ರಾಜಕುಮಾರ್ ಅವರ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಮೋಹನ್ ಸಿನಿಮಾ ವಿತರಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕಳೆದ ಬಾರಿ ವಿಕೆ ಮೋಹನ್ ಅವರಿಗೆ ಸೇರಿದ ಕ್ಲಬ್ ಮೇಲೆ ಐಟಿ ದಾಳಿ ನಡೆದು, ಬಂಧನಕ್ಕೆ ಒಳಗಾಗಿದ್ದರು. ಇದರಿಂದಾಗಿಯೇ ಮೋಹನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ತಿಳಿದುಬಂದಿದೆ.

ಈ ಹಿಂದೆ ಕೂಡ ವಿ.ಕೆ.ಮೋಹನ್ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಇದೇ ನೋವಿನಲ್ಲೇ ಆರ್ಥಿಕವಾಗಿಯೂ ಕುಗ್ಗಿ ಹೋಗಿದ್ದರು. ನಿನ್ನೆ ಫಾರ್ಮ್ ಹೌಸ್​ಗೆ ಬಂದಿದ್ದ ಮೋಹನ್ ಅವರು ಸೋಮವಾರ ರೂಮ್ ಬಾಗಿಲು ತೆಗೆಯದೇ ಇದ್ದಾಗ ಅನುಮಾನಗೊಂಡ ಸಿಬ್ಬಂದಿ ಕಿಟಕಿಯಲ್ಲಿ ನೋಡಿದಾಗ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.