

ಬಳ್ಳಾರಿ: ಕರೊನಾ ವೈರಸ್ ಸೋಂಕಿನ ಸರಪಳಿಯನ್ನು ಬ್ರೇಕ್ ಮಾಡುವ ಒಳ್ಳೆಯ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಜನತಾ ಕರ್ಪ್ಯೂಗೆ ಕರೆ ನೀಡಿದ್ದರು. ಮನೆಯಿಂದ ಯಾರು ಹೊರಬರಬೇಡಿ ಎಂದು ಹೇಳಿದ್ದರೂ ಸಹ ಅದನ್ನು ಲೆಕ್ಕಿಸದೇ ಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ನೀರು ಪಾಲಾಗಿದ್ದಾನೆ.
ಕೂಡ್ಲಿಗಿ ತಾಲೂಕಿನ ರಾಮದುರ್ಗ ಕೆರೆಯಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ. ಚೋರನೂರು ಗ್ರಾಮದ ನಿವಾಸಿ ಚೇತು(22) ಮೃತ ಯುವಕ. ಜನತಾ ಕರ್ಪ್ಯೂ (ರಜೆ) ದಿನವೇ ಕೆರೆಯಲ್ಲಿ ಟಿಕ್ಟಾಕ್ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಚೇತು ಜನತಾ ಕರ್ಪ್ಯೂ ದಿನ ರಜೆ ಇದ್ದುದ್ದರಿಂದ ಸ್ನೇಹಿತರ ಜತೆ ಈಜಲು ಕೆರೆಗೆ ಹೊಗಿದ್ದ. ಸ್ನೇಹಿತರೊಂದಿಗೆ ಕೆರೆಯ ತೂಬಿನಿಂದ ಡ್ಯಾನ್ಸ್ ಮಾಡುತ್ತಾ ನೀರಿಗೆ ಹಾರಿದ್ದ. ಆದರೆ, ನೀರಿಗೆ ಹಾರಿದ ಮೂರವರಲ್ಲಿ ಇಬ್ಬರು ಮಾತ್ರ ಹೊರಕ್ಕೆ ಬಂದಿದ್ದಾರೆ. ದುರಾದೃಷ್ಟವಶಾತ್ ಚೇತು ನೀರುಪಾಲಾಗಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗುಡೇಕೋಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)