More

    ಕರೊನಾ ಸಂಪೂರ್ಣ ಕಟ್ಟಿ ಹಾಕಲು ಎಲ್ಲರೂ ಕೈಜೋಡಿಸೋಣ

    ಡಾ. ಕೆ.ಪಿ. ಪುತ್ತೂರಾಯ

    ಕರೊನಾ ಸೋಂಕು ಜಗತ್ತಿನಾದ್ಯಂತ ಹಿಂದೆಂದೂ ಕಾಣದಂತಹ ತುರ್ತು ಪರಿಸ್ಥಿತಿ ತಂದೊಡ್ಡಿದೆ. ಈ ಕೆಟ್ಟ ಸೋಂಕು ಗಡಿದಾಟಿ ನಮ್ಮ ದೇಶದೊಳಗೂ ಬಂದಾಗಿದೆ. ಯಾವುದೇ ತಾರತಮ್ಯವಿಲ್ಲದೆ, ಎದುರು ಸಿಕ್ಕಸಿಕ್ಕವರ ದೇಹದೊಳಗೆ ತೂರಿ ಪ್ರಾಣ ಹೀರಲು ಹೊಂಚು ಹಾಕಿದೆ. ಇದರ ದಾಳಿ ಮತ್ತು ವೇಗ 3ನೇ ಹಂತವನ್ನು ತಲುಪಿಬಿಟ್ಟರಂತೂ ನಿಯಂತ್ರಿಸಲಾಗದ ಸಾಮೂಹಿಕ ಸಾವುಗಳನ್ನೇ ತಂದೊಡ್ಡಬಹುದು. ಈ ಧಾರುಣ ಸ್ಥಿತಿಯನ್ನು ತಡೆಹಿಡಿಯಲು ಸಮರೋಪಾದಿಯಲ್ಲಿ ಒಟ್ಟಾಗಿ ನಾವೆಲ್ಲರೂ ಮಾಡಲೇಬೇಕಾದ ಕೆಲಸವೆಂದರೆ ಸ್ವಚ್ಛತೆ ಮತ್ತು ಸ್ವಯಂರಕ್ಷಣೆಯ ಮೂಲಕ ಅದು ಹರಡುತ್ತಿರುವ ವೇಗವನ್ನು ತಡೆಹಿಡಿಯುವುದು ಹಾಗೂ ಈ ವೈರಾಣುಗಳ ದಾರಿ ತಪ್ಪಿಸಿ, ಪ್ರಾಕೃತಿಕವಾಗಿಯೇ ಅವು ಪತನ ಹೊಂದುವಂತೆ ಮಾಡುವುದು.

    ಈ ನಿಟ್ಟಿನಲ್ಲಿ ನಾವು ಮಾಡಬಾರದುದೆಂದರೆ

    ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ. ಇದು ಸರ್ವತಾ ಸಲ್ಲ. ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದ ಒಂದೇ ಒಂದು ತಪ್ಪಿಗೆ ಮುಂದುವರಿದ ದೇಶಗಳೇ ತೆತ್ತ ಹಾಗೂ ತೆರುತ್ತಿರುವ ಬೆಲೆಯನ್ನು ನಾವು ಕಾಣುತ್ತಿದ್ದೇವೆ. ನಿರ್ಲಕ್ಷಿಸಿದರೆ, ನಮ್ಮ ಅಂತ್ಯಕ್ಕೆ ಮಾತ್ರವಲ್ಲ, ನಮ್ಮ ಸಂಪರ್ಕದಲ್ಲಿ ಬರುವ ಇತರರ ಸಾವಿಗೂ ಕಾರಣರಾಗುತ್ತೇವೆ.

    ಹಾಗೆಂದು, ಅತಿಯಾದ, ಅನವಶ್ಯಕವಾದ ಆತಂಕ-ಭಯ ಬೇಡ. ಸ್ವಲ್ಪ ನೆಗಡಿ, ಕೆಮ್ಮು ಇದ್ದ ಮಾತ್ರಕ್ಕೆ ಅದು ಕರೊನಾ ಸೋಂಕೇ ಆಗಬೇಕೆಂದಿಲ್ಲ. ಒಂದು ವೇಳೆ. ಅದು ನಿಜವಾಗಿಯೂ ಕರೊನಾ ಸೋಂಕೇ ಆಗಿದ್ದರೂ ರೋಗ ನಿರೋಧಕ ಶಕ್ತಿ ಹೊಂದಿರುವ ಶೇ. 80-90 ಜನರಲ್ಲಿ ಲಘು ಅಥವಾ ಸಾಧಾರಣ ಲಕ್ಷಣಗಳನ್ನು ತೋರಿಸುತ್ತ 8-10 ದಿನಗಳಲ್ಲಿ ತಾನಾಗಿಯೇ ಶಮನಗೊಳ್ಳುತ್ತೆ. ಉಳಿದ ಶೇ.10 ಜನರ ಪೈಕಿ ಅಂದಾಜು ಶೇ.3-4 ರೋಗಿಗಳು ಮಾತ್ರ ಸಾವಿನ ಹಂತ ತಲುಪಬಹುದಾದರೂ, ಎಲ್ಲವನ್ನು ನಿಯಂತ್ರಿಸಲು ಆಸ್ಪತ್ರೆಗಳು ಸಜ್ಜಾಗಿವೆ.

    ಇನ್ನು ಕೆಲ ದಿನಗಳ ಕಾಲ, ಸಣ್ಣಪುಟ್ಟ ತೊಂದರೆಗಳಿಗೆ ತಪಾಸಣೆಗಳಿಗೆಂದು ಆಸ್ಪತ್ರೆಗಳಿಗೆ ಹೋಗದಿರುವುದೇ ಒಳಿತು. ಕಾರಣ, ಅಲ್ಲೇ ಇರಬಹುದಾದ ಸೋಂಕನ್ನು ನಾವೇ ಆಹ್ವಾನಿಸಿಕೊಂಡಂತಾಗುತ್ತದೆ.

    ಎಲ್ಲರೂ ಮಾಸ್ಕ್​ಗಳನ್ನು ಧರಿಸುವ ಅವಶ್ಯಕತೆ ಇಲ್ಲ. ಹೀಗೆ ಮಾಡಿದರೆ, ಅವುಗಳ ಅತಿಯಾದ ಅವಶ್ಯಕತೆ ಇರುವವರಿಗೆ ಲಭ್ಯವಿಲ್ಲದಂತಾಗಿ ಪರಿಸ್ಥಿತಿ ಬಿಗಡಾಯಿಸಬಹುದು. ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ ನಮ್ಮ ರಾಜ್ಯದಲ್ಲಿರುವ ವೆಂಟಿಲೇಟರ್​ಗಳು ಯಾವ ಮೂಲೆಗೂ ಸಾಲದು.

    ಅಂತೆಯೇ ನಾವು ತುಂಬಾ ಪ್ಯಾನಿಕ್ ಆಗಿ ಬಿಟ್ಟರೆ ಕೆಲವರಲ್ಲಿ ಅದು ಆತ್ಮಹತ್ಯೆಗೆ ಪ್ರೇರಣೆಯಂಥ ದುರ್ಬಲ ಮನಸ್ಥಿತಿಗೂ ಕಾರಣವಾಗಬಹುದು.

    ನಾವು ಮಾಡಲೇ ಬೇಕಾದುದೆಂದರೆ

    ಸೋಂಕು ತಗಲಿದ್ದರೂ ಆರಂಭದಲ್ಲಿ ಲಕ್ಷಣ ಗೋಚರಿಸುವುದಿಲ್ಲ. ಆದರೆ, ಶೀತ-ನೆಗಡಿ- ಕೆಮ್ಮು- ಉಸಿರಾಟದ ತೊಂದರೆಗಳೆಲ್ಲವೂ ಹೆಚ್ಚು ಕಾಡಲಾರಂಭಿಸಿದರೆ, ತಡಮಾಡದೆ ವೈದ್ಯಕೀಯ ತಪಾಸಣೆ ಬೇಕು.

    ಮುಂಜಾಗ್ರತಾ ಕ್ರಮವಾಗಿ ಸೋಂಕಿನ ಲಕ್ಷಣಗಳು ಇರಲಿ, ಇರದಿರಲಿ, ಎಲ್ಲರೂ ಪಾಲಿಸಬೇಕಾದ ನಿಯಮಗಳೆಂದರೆ-

    (ಅ) ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಈ ಸೋಂಕು ನಮ್ಮ ದೇಹದೊಳಗೆ ಪ್ರವೇಶ ಮಾಡಬಹುದಾದ ಏಕೈಕ ದಾರಿ ಎಂದರೆ ಮೂಗು ಮತ್ತು ಬಾಯಿಯ ಮಾರ್ಗವಾಗಿ ಒಳಸೇರುವ ಗಾಳಿ. ಇದನ್ನು ನಿಯಂತ್ರಿಸಲು ಎಲ್ಲರಿಂದಲೂ ಕನಿಷ್ಠ 1 ಮೀಟರ್ ಅಂತರವನ್ನು ಇಟ್ಟುಕೊಳ್ಳಬೇಕು. ಸೋಂಕು ಪೀಡಿತ ವ್ಯಕ್ತಿಯಿಂದ ಈ ಸೋಂಕು ಹೊರಗೆ ಬರಲೂ ಇದೇ ದಾರಿ. ಈತ ಸೀನಿದಾಗ, ಕೆಮ್ಮಿದಾಗ ವೈರಾಣುಗಳು ಅಧಿಕ ಸಂಖ್ಯೆಯಲ್ಲಿ ಹೊರಬರುತ್ತವೆ. ಅದನ್ನು ತಡೆಹಿಡಿಯಲು ಸೋಂಕು ಇರಲಿ, ಇರದಿರಲಿ, ಕೆಮ್ಮಿದಾಗ, ಸೀನಿದಾಗ, ಮುಖಕ್ಕೆ ಕೈ ಅಡ್ಡ ಇಟ್ಟುಕೊಳ್ಳುವ ಇಲ್ಲವೆ ಟಿಶ್ಯೂ ಪೇಪರ್, ಕರವಸ್ತ್ರಗಳಿಂದ ಬಾಯಿ ಮುಚ್ಚಿಕೊಳ್ಳುವ ಅಭ್ಯಾಸ ಎಲ್ಲರಿಗೂ ಸುರಕ್ಷಿತ.

    (ಆ) ಕರೊನಾ ವೈರಾಣು ಯಾವ ವಸ್ತುವಿನ ಮೇಲೂ ಅಂಟಿಕೊಂಡಿರಬಹುದು. ಇಂತಹ ವಸ್ತುಗಳ ಮೇಲೆ, ನಾವು ಕೈ ಇಟ್ಟಾಗ, ಅದು ನಮ್ಮ ಕೈಗೆ ಸೇರಿಕೊಂಡು ಮತ್ತೆ ನಾವು ಅದೇ ಕೈಗಳಿಂದ ಮೂಗು, ಬಾಯಿಯನ್ನು ಮುಟ್ಟಿದಾಗ ಅವು ಸುಲಭವಾಗಿ ನಮ್ಮ ದೇಹದೊಳಗೆ ಸೇರಿಕೊಂಡು ಬಿಡುತ್ತವೆ. ಹಾಗಾಗಿ ಪದೇಪದೆ ಮೂಗು, ಬಾಯಿ ಮುಟ್ಟಿಕೊಳ್ಳುವ ಅಭ್ಯಾಸ ಬಿಡಬೇಕು. ಅಂತೆಯೇ ಹೊರಗಿನ ಯಾವುದೇ ವಸ್ತುಗಳನ್ನು ಮುಟ್ಟಿದರೂ, ಆಗಾಗ ಸಾಬೂನಿನಿಂದ ಕೈ ತೊಳೆಯುತ್ತಿರಬೇಕು.

    ಸಾಮಾಜಿಕ ಮಾಧ್ಯಮಗಳಲ್ಲಿ ಕರೊನಾ ಸೋಂಕಿನ ಬಗ್ಗೆ ಮಾಹಿತಿಗಳ ಮಹಾಪೂರವೇ ಹರಿದುಬರುತ್ತಿದೆ. ಅವುಗಳ ಪೈಕಿ ವೈಜ್ಞಾನಿಕವಾದ ಸಲಹೆ ಮತ್ತು ಸೂಚನೆಗಳತ್ತ ಮಾತ್ರ ಗಮನಹರಿಸೋಣ.

    ಇನ್ನೆರಡ್ಮೂರು ವಾರ, ಪರಿಸ್ಥಿತಿ ಹತೋಟಿಗೆ ಬರುವಲ್ಲಿಯವರೆಗೆ, ಸಾಮೂಹಿಕವಾಗಿ ಸೇರೋದನ್ನ ನಿಲ್ಲಿಸೋಣ. ನಮ್ಮ ಪ್ರಧಾನಿಯವರು ಕರೆ ನೀಡಿದ ಸ್ವಯಂಪ್ರೇರಿತ ದಿಗ್ಬಂಧನ (ಜನತಾ ಕರ್ಫ್ಯೂ) ಮುಂದೆ ಬರಬಹುದಾದ ರಾಷ್ಟ್ರೀಯ ದಿಗ್ಬಂಧನಕ್ಕೆ (ರಾಷ್ಟ್ರವ್ಯಾಪಿ ಲಾಕೌಟ್) ಒಂದು ಪೂರ್ವತಯಾರಿ ಇಲ್ಲವೆ ಸಿದ್ಧತೆ. ಇದರ ಹೊರತಾಗಿ ಸೋಂಕು 3ನೇ ಹಂತ ತಲುಪುವುದನ್ನು ತಡೆಯುವ ದಾರಿ ಬೇರೊಂದಿಲ್ಲ. ಈ ಗಂಭೀರ ಪರಿಸ್ಥಿತಿ ನಿಭಾಯಿಸುವಲ್ಲಿ ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿರುವವರನ್ನು ಆಗಾಗ ಸ್ಮರಿಸೋಣ.

    ಇದು ಜಗತ್ತಿಗೇ, ದೇಶಕ್ಕೇ ಬಂದೊದಗಿರುವ ದುರಂತ. ಈ ಮಹಾಮಾರಿ ಬಗ್ಗುಬಡಿಯುವಲ್ಲಿ, ಬಿಟ್ಟೋಡಿಸುವಲ್ಲಿ ಎಲ್ಲರ ಪಾತ್ರವಿದೆ. ಬನ್ನಿ ಕರೊನಾ ಕಟ್ಟಿಹಾಕಲು ಎಲ್ಲರೂ ಕೈಜೋಡಿಸೋಣ.

    (ಲೇಖಕರು-ಪ್ರಾಧ್ಯಾಪಕರು, ಸಾಹಿತಿ)

    ಭಾನುವಾರ ಒಂದೇ ದಿನ ರಾಜ್ಯದಲ್ಲಿ 6 ಮಂದಿ ಕರೊನಾ ವೈರಸ್​ ಸೋಂಕಿತರು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts