ಗುರುಪುರ: ಕಂದಾವರ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ 2024-25ನೇ ಸಾಲಿನ ಶೇ.25ರ ಎಸ್‌ಸಿ/ಎಸ್‌ಟಿ ಅನುದಾನದಲ್ಲಿ 40 ಮಂದಿಗೆ ನೀರಿನ ಟ್ಯಾಂಕ್ ಮತ್ತು 27 ಮಂದಿ ವಿಕಲಾಂಗರಿಗೆ ಚೆಕ್ ಹಾಗೂ ಹಕ್ಕುಪತ್ರ ಮನೆ ನಿವೇಶನ ಪಡೆದುಕೊಂಡ 86 ಮಂದಿಗೆ ನಿವೇಶನ ಹಂಚಲಾಯಿತು.
ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಕಳೆದ ಎರಡು ಅವಧಿಯಲ್ಲಿ ಕಂದಾವರ ಗ್ರಾಪಂಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಶಾಸಕನಾಗಿ ಮೊದಲ ಅವಧಿಯಲ್ಲಿ 183 ಹಕ್ಕುಪತ್ರ ನೀಡಲಾಗಿತ್ತು. 16 ಲಕ್ಷ ರೂ. ಅನುದಾನದಲ್ಲಿ ನಿವೇಶನಕ್ಕೆ ರಸ್ತೆ ನಿರ್ಮಿಸಲಾಗಿತ್ತು ಎಂದರು.
ಬಾಕಿ ಉಳಿದವರಿಗೆ ಮನೆ ನಿವೇಶನ ಶೀಘ್ರ ಒದಗಿಸಲಾಗುವುದು. ಚೀಟಿ ಎತ್ತುವ ಮೂಲಕ ಪಾರದರ್ಶಕವಾಗಿ ನಿವೇಶನ ನೀಡುವ ಪ್ರಕ್ರಿಯೆ ನಡೆದಿದೆ. ಪಂಚಾಯಿತಿ ಮತ್ತು ತನ್ನ ವತಿಯಿಂದ ಸ್ಥಳೀಯರಿಗೆ ನೆರವಾಗಬೇಕು. ಮನೆ ಕಟ್ಟುವ ಕನಸು ನನಸಾಗಬೇಕು ಎಂದರು.
ಪಂಚಾಯಿತಿ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಉದಯ ರಾವ್, ಸದಸ್ಯರು, ಕಾರ್ಯದರ್ಶಿ ಮತ್ತಿತರರು ಇದ್ದರು.