ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಗೊಂಡ ನಾಲ್ಕೂರು ಗ್ರಾಮದ ನೆಂಚಾರು ಕಾಳಿಮದಗ ಕೆರೆಯ ಬಳಿ ಫಲಕ, ತಡೆಗೋಡೆ, ಪಾರ್ಕ್, ಧ್ವಜ ಕಟ್ಟೆ ನಿರ್ಮಿಸಿರುವುದು. 
ಜಿಲ್ಲೆ

ಕಾಳಿಮದಗ ಕೆರೆಯಲ್ಲಿ ಅಮೃತ!

Avinash R

-ಅನಂತ ನಾಯಕ್ ಮುದ್ದೂರು, ಕೊಕ್ಕರ್ಣೆ

ಗ್ರಾಮೀಣ ಭಾಗಗಳಲ್ಲಿರುವ ಜಲಮೂಲಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಅಮೃತ ಸರೋವರ ಯೋಜನೆ’ ಜಾರಿಗೊಳಿಸಿದೆ. ಈ ಯೋಜನೆಯಡಿ ಆಯ್ಕೆಯಾಗಿದ್ದ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ನಂಚಾರಿನ ಕಾಳಿಮದಗ ಕೆರೆ ಜೀರ್ಣೋದ್ಧಾರಗೊಂಡಿದೆ.

ಮಳೆಗಾಲ ಆರಂಭವಾಗುವ ಮೊದಲೇ ಬೇಸಿಗೆಯಲ್ಲಿಯೇ ಸಂಪೂರ್ಣ ಕಾಮಗಾರಿ ಮುಗಿದಿತ್ತು. ಇದೀಗ ಉತ್ತಮ ಮಳೆಯಾಗುತ್ತಿರುವುದರಿಂದ ನೀರು ಭರ್ತಿಯಾಗಿದ್ದು, ಜಲಮದದಿಂದ ಕೆರೆ ಬೀಗುತ್ತಿದೆ.

ಸುಂದರ ಪರಿಸರ

ನೀರು ಭರ್ತಿಯಾಗಿರುವ ಕೆರೆಯ ಬಳಿ ‘ಅಮೃತ ಸರೋವರ’ ಎಂಬ ಫಲಕ ಅಳವಡಿಸಲಾಗಿದೆ. ಕೆರೆ ಸುತ್ತಮುತ್ತ ಬೆಳೆದಿದ್ದ ಗಿಡ-ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಹೂಳು ತೆರವು ಸೇರಿದಂತೆ ಅಭಿವೃದ್ಧಿ ಕಾಮಗಾರಿ ನಡೆದಿದೆ. ಕೆರೆಯ ಬದಿಯಲ್ಲಿ ಶಿಲೆಕಲ್ಲುಗಳಿಂದ ತಡೆಗೋಡೆ ರಚಿಸಲಾಗಿದ್ದು, ಸುಂದರ ಪರಿಸರದ ಅಂದ ಹೆಚ್ಚಿಸಿದೆ. ಕೆರೆಯ ಪಕ್ಕದಲ್ಲಿ ಸೋಲಾರ್ ದೀಪದ ವ್ಯವಸ್ಥೆ, ಪಾರ್ಕಿಂಗ್, ರ್ಧವಜ ಕಟ್ಟೆ, ಉದ್ಯಾನವನ ನಿರ್ಮಾಣ ಹಾಗೂ ಸ್ವಚ್ಛತೆಗೆ ಮಹತ್ವ ನೀಡಲಾಗಿದೆ.

ಅಂದ ಹೆಚ್ಚಿಸಿಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕಾಳಿಮದಗ ಸರೋವರ.

ಅಂತರ್ಜಲ ವೃದ್ಧಿ

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸರೋವರ ತುಂಬಿದೆ. ಕೆರೆಯ ಹೂಳೆತ್ತಿ, ಕೆರೆಗೆ ಹರಿದು ಬರುವ ತೋಡುಗಳನ್ನು ಪುನಶ್ಚೇತನಗೊಳಿಸಿದ್ದರಿಂದ ನೀರು ಸರಾಗವಾಗಿ ಹರಿದು ಬರುತ್ತಿದೆ. ಇದರಿಂದ ಬೇಸಿಗೆಯಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ. ಅಲ್ಲದೆ, ಕೆರೆಯ ಆಸುಪಾಸಿನಲ್ಲಿರುವ ಗದ್ದೆಗಳಿಗೂ ಕೃಷಿ ಕಾರ್ಯಕ್ಕೆ ವರದಾನವಾಗಲಿದೆ. ಮುಂಗಾರು ಹಂಗಾಮಿನಲ್ಲಿ ಮಳೆ ನೀರು ಇರುವುದರಿಂದ ಈ ಕೆರೆಯ ನೀರು ಅಷ್ಟೇನೂ ಪ್ರಯೋಜನಕ್ಕೆ ಬಾರದಿದ್ದರೂ ಹಿಂಗಾರಿನಲ್ಲಿ ಸಹಕಾರಿಯಾಗಲಿದೆ.

ಯೋಜನೆ ಉದ್ದೇಶ

ಜಲ ಮೂಲಗಳ ಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಿಸುವುದು ‘ಮಿಷನ್ ಅಮೃತ್ ಸರೋವರ’ದ ಮುಖ್ಯ ಉದ್ದೇಶ. ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ಜಾರಿಗೊಳಿಸಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಬತ್ತಿ ಹೋಗಿರುವ ಕೆರೆಗಳಿಗೆ ಮರುಜೀವ ತರುವಲ್ಲಿ ಈ ಯೋಜನೆ ಅಮೃತಸದೃಶವಾಗಿದೆ.

1.5 ಎಕರೆ ವಿಸ್ತೀರ್ಣ

ಗ್ರಾಮೀಣ ಪ್ರದೇಶದ ಕೆರೆಗಳನ್ನು ಅಭಿವೃದ್ಧಿ ಪಡಿಸಲು ವಿವಿಧ ಇಲಾಖೆಗಳೂ ಕೈಜೋಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಾಳಿಮದಗ ಕೆರೆ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ನರೇಗಾ ಯೋಜನೆ ವ್ಯಾಪ್ತಿಯಡಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ನಾಲ್ಕೂರು ನಂಚಾರು ಮುಖ್ಯ ರಸ್ತೆಯ ಪಕ್ಕದಲ್ಲೇ ಈ ಕೆರೆಯಿದ್ದು, ಸುಮಾರು 1.5 ಎಕರೆ ವಿಸ್ತೀರ್ಣ ಹೊಂದಿದೆ. 10ರಿಂದ 15 ಸಾವಿರ ಕ್ಯೂಬಿಕ್ ಮಿಲಿ ಮೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಪ್ರಕೃತಿ ದತ್ತವಾದ ಬಂಡೆ ಕಲ್ಲಿನಿಂದ ರಚಿತವಾಗಿರುವ ಕೆರೆಯ ಈ ಪ್ರದೇಶ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಅಮೃತ ಸರೋವರ ಯೋಜನೆಯಿಂದ ಗ್ರಾಮದಲ್ಲಿ ಒಂದು ಉದ್ಯಾನವನ ನಿರ್ಮಿಸಿದಂತಾಗಿದ್ದು, ಪ್ರವಾಸಿ ತಾಣವಾಗಿ ಮಾರ್ಪಾಡಾಗುತ್ತಿದೆ. ಕೆರೆಯಲ್ಲಿ ನೀರು ಶೇಖರಣೆ ಮಾಡಿದ್ದರಿಂದ ಸುತ್ತಲಿನ ಕೃಷಿಕರಿಗೆ ಅಂತರ್ಜಲ ವೃದ್ಧಿಯಾಗುತ್ತದೆ.-ಸೀತಾರಾಮ ಆಚಾರ್ಅಭಿವೃದ್ಧಿ ಅಧಿಕಾರಿ, ನಾಲ್ಕೂರು ಗ್ರಾಪಂ
ನೀರು, ಕೆರೆ ಸಂರಕ್ಷಿಸಲು ಅಮೃತ ಯೋಜನೆ ಉತ್ತಮವಾಗಿದೆ. ಉದ್ಯೋಗ ಖಾತರಿ ಮತ್ತು ಹಲವು ಅನುದಾನಗಳ ಮೂಲಕ ಕಾಳಿಮದಗ ಕೆರೆಗೆ ಜೀವಕಳೆ ಬಂದಿದೆ. ನಾಲ್ಕೂರು ಗ್ರಾಮದಲ್ಲಿರುವ ಎಲ್ಲ ಮದಗ ಕೆರೆಗಳ ಪುನಶ್ಚೇತನಕ್ಕೆ ಗಮನ ಹರಿಸುತ್ತೇವೆ.-ವಿಜಯ ನಾಯ್ಕಅಧ್ಯಕ್ಷ, ನಾಲ್ಕೂರು ಗ್ರಾಪಂ