More

    ತ್ರಾಸಿ ರಸ್ತೆಯಲ್ಲಿ ತ್ರಾಸ

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಜಂಕ್ಷನ್ ಬಳಿಯಿಂದ ಗುಜ್ಜಾಡಿ, ಗಂಗೊಳ್ಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡ-ಗುಂಡಿ ಬಿದ್ದಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

    ತ್ರಾಸಿ ಜಂಕ್ಷನ್‌ನಿಂದ ಕೊಡಪಾಡಿ, ನಾಯಕವಾಡಿ, ಗುಜ್ಜಾಡಿ, ಗಂಗೊಳ್ಳಿಗೆ ಸಂಪರ್ಕಿಸುವ ಈ ರಸ್ತೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿದೆ. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮುತುವರ್ಜಿಯಿಂದಾಗಿ ಗಂಗೊಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆದಿದೆ. ಆದರೆ, ಗುಜ್ಜಾಡಿಯಿಂದ ತ್ರಾಸಿವರೆಗಿನ 2-3 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸವಾರರು ಕಷ್ಟ ಪಡುವಂತಾಗಿದೆ.

    ಚರಂಡಿ ಇಲ್ಲ

    ಮುಖ್ಯ ರಸ್ತೆಯುದ್ದಕ್ಕೂ ಅನೇಕ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಪ್ರತಿವರ್ಷ ರಸ್ತೆಯಲ್ಲಿಯೇ ಮಳೆ ನೀರು ಹರಿಯುತ್ತದೆ. ಹೀಗಾಗಿ ರಸ್ತೆಗೆ ಹಾಕಿರುವ ಡಾಂಬರು ನೀರಿನಲ್ಲಿ ಕೊಚ್ಚಿ ಹೋಗಿ ಹೊಂಡ-ಗುಂಡಿ ಬೀಳುತ್ತವೆ. ಪ್ರತಿವರ್ಷ ತೇಪೆ ಹಾಕುವ ಕಾರ್ಯ ಮಾಡುತ್ತಿದ್ದರೂ, ಮಳೆಗಾಲದಲ್ಲಿ ಮತ್ತೆ ಡಾಂಬರು ಕಿತ್ತು ಹೋಗುತ್ತಿದೆ. ರಸ್ತೆಯ ಅಭಿವೃದ್ಧಿಯೊಂದಿಗೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಿ ಎನ್ನುವುದು ಸ್ಥಳೀಯರ ಬೇಡಿಕೆ.

    ಹುಸಿ ಭರವಸೆ

    ಅನೇಕ ವರ್ಷಗಳಿಂದ ಈ ರಸ್ತೆಗೆ ಮರು ಡಾಂಬರೀಕರಣ ಅಥವಾ ಅಭಿವೃದ್ಧಿಗೆ ಆಗ್ರಹಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಭಿವೃದ್ಧಿಗೆ ಅನುದಾನ ಮಂಜೂರಾಗುತ್ತದೆ ಎನ್ನುವ ಆಶ್ವಾಸನೆ ಕೇವಲ ಭರವಸೆಯಾಗಿಯೇ ಉಳಿದಿದೆ. ಈ ಬಾರಿಯಾದರೂ ರಸ್ತೆಯ ಅಭಿವೃದ್ಧಿಯಾಗಲಿ ಎನ್ನುವುದು ಈ ಭಾಗದ ನಾಗರಿಕರ ಆಗ್ರಹ.

    ನಿತ್ಯದ ಚಟುವಟಿಕೆಗೆ ತೊಡಕು

    ತ್ರಾಸಿಯಿಂದ ಗಂಗೊಳ್ಳಿಯ ಮೀನುಗಾರಿಕಾ ಬಂದರು, ಬೆಣ್ಗೆರೆ, ಕಂಚುಗೋಡಿನ ಮೀನುಗಾರಿಕಾ ರಸ್ತೆ ಸಂಪರ್ಕಿಸುವ ಪ್ರಮುಖ ಕೊಂಡಿ ಇದಾಗಿದ್ದು, ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆ ನಡೆಯಲು ಅನುಕೂಲವಾಗುವ ರಸ್ತೆ ಇದಾಗಿದೆ. ಗಂಗೊಳ್ಳಿ ಬಂದರಿನಿಂದ ಮೀನು ಸಾಗಾಟದ ವಾಹನ, ಮೀನುಗಾರಿಕೆ ಸಲಕರಣೆ ಸಾಗಿಸುವ ವಾಹನ, ಹಲವಾರು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು, ಶಾಲಾ ವಾಹನಗಳು, ಕಾರು, ಆಟೋ ಸಹಿತ ದಿನವೂ ಸಾವಿರಾರು ವಾಹನ ಇದೇ ಮಾರ್ಗವಾಗಿ ಸಂಚರಿಸುತ್ತದೆ. ಇದೀಗ ರಸೆಯಲ್ಲಿ ಉಂಟಾದ ಹೊಂಡ-ಗುಂಡಿಯಿಂದಾಗಿ ನಿತ್ಯದ ಎಲ್ಲ ಚಟುವಟಿಕೆಗೂ ಅಡ್ಡಿಯಾಗುತ್ತಿದೆ.

    ಈಗಾಗಲೇ ಗಂಗೊಳ್ಳಿಯಿಂದ ಮುಖ್ಯ ರಸ್ತೆಯ ಕಾಂಕ್ರೀಟ್ ಕಾಮಗಾರಿ ಆಗಿದೆ. ಗುಜ್ಜಾಡಿಯಿಂದ ತ್ರಾಸಿವರೆಗಿನ ಮುಖ್ಯ ರಸ್ತೆಯ ಅಭಿವೃದ್ಧಿ ಮಾಡುವ ವಿಚಾರ ಗಮನದಲ್ಲಿದೆ. ಈ ರಸ್ತೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು.
    -ಗುರುರಾಜ ಗಂಟಿಹೊಳೆ
    ಶಾಸಕ, ಬೈಂದೂರು ವಿಧಾನಸಭಾ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts