ಜಿಲ್ಲೆ

ಡಾ. ಸುಧಾಕರ್‌ಗೆ ಮಹಿಳಾ ಕಾಂಗ್ರೆಸ್‌ನಿಂದ 'ಅನಾರೋಗ್ಯ' ಮಂತ್ರಿ ಪಟ್ಟ!

ಬೆಂಗಳೂರು: 225 ಶಾಸಕರ ವಿವಾಹೇತರ ಸಂಬಂಧದ ಬಗ್ಗೆ ತನಿಖೆಯಾಗಲಿ ಎಂಬ ಓಪನ್ ಚಾಲೆಂಜ್ ಹಾಕಿದ್ದ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ವಿರುದ್ಧ ಮಹಿಳಾ ಕಾಂಗ್ರೆಸ್ ದನಿ ಎತ್ತಿದೆ.

ಸುಧಾಕರ್ ಆರೋಗ್ಯ ಸಚಿವರಲ್ಲ, ಅನಾರೋಗ್ಯ ಸಚಿವ ಎಂದು ಟೀಕಿಸಿದ್ದು, ಅವರ ಹೇಳಿಕೆಯನ್ನು ಪ್ರಧಾನಿಯವರಿಗೂ ಕಳಿಸಿ ಗಮನ ಸೆಳೆಯುವುದಾಗಿ ಹೇಳಿದೆ.

ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುಧಾಕರ್ ಅವರನ್ನು ಅನಾರೋಗ್ಯ ಸಚಿವ ಎಂದು ಜರಿಯಲಾಯಿತು.

ರಾಮನ ಪಕ್ಷ, ಬಾಯಿ ಬಿಟ್ಟರೆ ರಾಮನ ಜಪ‌ಮಾಡುವ ಪಕ್ಷದಲ್ಲಿದ್ದು ಇಂತ ಹೇಳಿಕೆ ಕೊಡಲು ಬಿಜೆಪಿಯವರು ಸುಧಾಕರ್‌ ಅವರಿಗೆ ಹೇಗೆ ಬಿಟ್ಟರು, ಆ ಪಕ್ಷದ ಮಹಿಳಾ ನಾಯಕರು ಏಕೆ ಸುಮ್ಮನಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.

ಹಿಂದು ಸಂಸ್ಕೃತಿ ವಿರುದ್ಧವಾಗಿ ಸಚಿವ ಸುಧಾಕರ್ ಮಾತನಾಡಿದ್ದಾರೆ. ಇದು ಮಹಿಳಾ ಶಾಸಕಿಯರಿಗೆ ಮಾಡಿದ ಅಪಮಾನ ಎಂದ ಅವರು ಸಚಿವರಾಗಿ ಸಾಮೂಹಿಕವಾಗಿ ಬೊಟ್ಟು‌ಮಾಡಿದ್ದಾರೆ, ಯಾರ ವಿರುದ್ಧವಾದರೂ ದಾಖಲೆ ಇದ್ದರೆ ಅದನ್ನು ಕೋರ್ಟಿಗೆ ಹಾಜರು ಮಾಡಲಿ ಎಂದು ಸವಾಲೆಸೆದರು.

ಪುಷ್ಪಾ ಅಮರನಾಥ್ ಮಾತನಾಡಿ, ಆರೋಗ್ಯ ಸಚಿವರು ಸ್ಪೀಕರ್, ಮುಖ್ಯಮಂತ್ರಿ ಅವರನ್ನೊಳಗೊಂಡಂತೆ ಹಿರಿಯ ನಾಯಕರಿಗೆ ಅಪಮಾನ‌ ಮಾಡುವಂತಹ ಹೇಳಿಕೆ ನೀಡಿದ್ದಾರೆ. ಇದು ಶಾಸನ ಸಭೆಗೂ ಮಾಡಿದ ಅವಮಾನ ಎಂದು ಟೀಕಿಸಿದರು.