ಜಿಲ್ಲೆ

ಸಚಿತಾಗೆ ನ್ಯಾಯಾಂಗ ಬಂಧನ : ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ರವಾನೆ

ಸೌಮ್ಯ ಆರ್

ಕಾಸರಗೋಡು: ಉದ್ಯೋಗ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಪ್ರಕರಣದ ಆರೋಪಿ, ಮಾಜಿ ಡಿವೈಎಫ್‌ಐ ನೇತಾರೆ ಹಾಗೂ ಪುತ್ತಿಗೆ ಪಂಚಾಯಿತಿ ಬಾಡೂರು ಎಎಲ್‌ಪಿ ಶಾಲಾ ಶಿಕ್ಷಕಿ ಸಚಿತಾ ರೈ(27)ಯನ್ನು ಕಾಸರಗೋಡು ಜ್ಯುಡಿಶಿಯಲ್ ಪ್ರಥಮ ದರ್ಜೆ ನ್ಯಾಯಾಲಯ(ಪ್ರಥಮ)ಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಚಿತಾ ರೈಯನ್ನು ಕಣ್ಣೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಗುರುವಾರ ನ್ಯಾಯಾಲಯಕ್ಕೆ ಶರಣಾಗಲು ಕಾಸರಗೋಡು ವಿದ್ಯಾನಗರಕ್ಕೆ ತನ್ನ ಎಳೆಯ ಮಗುವಿನೊಂದಿಗೆ ಆಗಮಿಸಿದ ಆಕೆಯನ್ನು ಕಾಸರಗೋಡು ಡಿವೈಎಸ್‌ಪಿ ಸಿ.ಕೆ.ಸುನಿಲ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಹಲವರಿಂದ ಪಡೆದುಕೊಂಡ 78 ಲಕ್ಷ ರೂ. ಮೊತ್ತವನ್ನು ಕುಂಜಾರು ನಿವಾಸಿ ಚಂದ್ರಶೇಖರ ಎಂಬುವರಿಗೆ ನೀಡಲಾಗಿದೆ. ಇದಕ್ಕೆ ಪುರಾವೆಯಾಗಿ ಚೆಕ್ ಪಡೆದುಕೊಂಡಿದ್ದು, ಅದು ತನ್ನ ಬಳಿಯಿರುವುದಾಗಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ. ಕುಂಬಳೆ, ಮಂಜೇಶ್ವರ, ಬದಿಯಡ್ಕ ಹಾಗೂ ಉಪ್ಪಿನಂಗಡಿ ಠಾಣೆಗಳಲ್ಲಿ 12 ವಂಚನಾ ಪ್ರಕರಣಗಳು ದಾಖಲಾಗಿವೆ.