ಮೂಲ್ಕಿ: ಜಗತ್ತಿಗೆ ಶಾಂತಿ ಸಮಾಧಾನದ ಬೆಳಕು ಚೆಲ್ಲಲು ದೇವರು ಮಾನವರೂಪದಲ್ಲಿ ಅವತರಿಸಿ ನಮ್ಮೊಡನಿದ್ದು ನಮ್ಮನ್ನು ಸನ್ಮಾರ್ಗದತ್ತ ನಡೆಸಿದ ಯೇಸುಕ್ರಿಸ್ತರ ಜೀವನ ತತ್ವ ಆದರ್ಶ ನಮ್ಮ ಜೀವನದಲ್ಲಿ ಪ್ರತಿನಿತ್ಯ ಪಾಲಿಸುವಂತಾಗಬೇಕು ಎಂದು ಹಳೆಯಂಗಡಿ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚ್ ಸಭಾಪಾಲಕ ಅಮೃತ್ ರಾಜ್ ಖೋಡೆ ಹೇಳಿದರು.
ಮೂಲ್ಕಿ ಕಾರ್ನಾಡು ಅವರ್ ಲೇಡಿ ಆಫ್ ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಚರ್ಚ್ ಹಾಗೂ ಸೇಂಟ್ ಮದರ್ ಥೆರೇಸಾ ಆಫ್ ಕೊಲ್ಕತ್ತಾ ದೇನರಿ ಸುರತ್ಕಲ್ ವತಿಯಿಂದ ಗುರುವಾರ ಮೂಲ್ಕಿಯ ಸೇಂಟ್ ಜೋಸೆಫ್ ಹಾಲ್‌ನಲ್ಲಿ ನಡೆದ ಕ್ರಿಸ್‌ಮಸ್ ಐಕ್ಯತೆಯ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೇಂಟ್ ಮದರ್ ಥೆರೇಸಾ ಆಫ್ ಕೋಲ್ಕತ್ತ ದೇನರಿಯ ವಿಕಾರ್ ಫೋರೇನ್ ಆಸ್ಟಿನ್ ಫೆರಿಸ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಚರ್ಚ್ ಧರ್ಮಗುರು ಅಂಟನಿ ಶೇರಾ, ಕಾರ್ನಾಡು ಮಸೀದಿ ಧರ್ಮಗುರು ಜನಾಬ್ ಅಬ್ದುಲ್ ರಜಾಕ್ ಮದನಿ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಮೂಲ್ಕಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ, ಕಾರ್ಯದರ್ಶಿ ಎಡ್ವಿನ್ ಡಿಸೋಜ ಮತ್ತು ಧರ್ಮಸಭಾ ಸದಸ್ಯರು ಉಪಸ್ಥಿತರಿದ್ದರು. ಸೆವೆರಿನ್ ಮಿನೇಜಸ್ ನಿರೂಪಿಸಿದರು.