ಜಿಲ್ಲೆ

ಪ್ರಧಾನಿ ಮೋದಿ ಕರೆಕೊಟ್ಟಿರುವ ಜನತಾ ಕರ್ಪ್ಯೂಗೆ ರಾಜ್ಯದಲ್ಲಿ ಉತ್ತಮ ಆರಂಭ: ಇಡೀ ಕರ್ನಾಟಕವೇ ಸ್ತಬ್ಧ

ಬೆಂಗಳೂರು: ಜಾಗತಿಕವಾಗಿ ಮರಣ ಮೃದಂಗ ಮುಂದುವರಿಸಿರುವ ಕರೊನಾ ವೈರಸ್​ ಸೋಂಕು ಭಾರತದಲ್ಲೂ ಐವರ ಪ್ರಾಣವನ್ನು ಬಲಿಪಡೆದುಕೊಂಡಿದ್ದು, ವೇಗವಾಗಿ ಹರಡುತ್ತಿರುವ ಕೋವಿಡ್​-19 ಗೆ ಬ್ರೇಕ್​ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಪ್ಯೂಗೆ ರಾಜ್ಯದಲ್ಲಿ ಉತ್ತಮ ಆರಂಭ ದೊರಕಿದೆ.

ಇಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಜನತಾ ಕರ್ಪ್ಯೂ ಇರಲಿದೆ. ಈ ವೇಳೆ ಯಾರು ಮನೆಯಿಂದ ಹೊರಬರದೆ, ಅಲ್ಲಿಯೇ ಉಳಿದು ಸಾಂಕ್ರಮಿಕ ಕರೊನಾ ವೈರಸ್​ಗೆ ತಡೆವೊಡ್ಡಿ ಎಂಬುದು ಪ್ರಧಾನಿ ಅವರ ಆಶಯವಾಗಿದೆ. ಇದಕ್ಕೆ ಜನರು ಕೂಡ ಉತ್ತಮವಾಗಿ ಸ್ಪಂದಿಸಿದ್ದು, ಇಡೀ ದೇಶವೇ ಸ್ತಬ್ಧವಾಗಿದೆ.

ಸದಾ ಜನರಿಂದ ಗಿಜುಗುಡುವ ಬೆಂಗಳೂರು ಮಹಾನಗರವೇ ಖಾಲಿ ಖಾಲಿಯಾಗಿದೆ. ಬಿಎಂಟಿಸಿ ಸೇರಿದಂತೆ ಅನೇಕ ವಾಹನಗಳು ರಸ್ತೆಗೆ ಇಳಿದಿಲ್ಲ. ಅಲ್ಲಲ್ಲಿ ಒಂದೆರಡು ವಾಹನಗಳು ಮಾತ್ರ ಕಣ್ಣಿಗೆ ಬೀಳುತ್ತಿವೆ. ಜನನಿಬಿಡ ಮಾರುಕಟ್ಟೆಗಳು ಕೂಡ ಬಿಕೋ ಎನ್ನುತ್ತಿವೆ. ಸದಾ ಟ್ರಾಫಿಕ್​ನಿಂದ ಕಿಕ್ಕಿರಿಯುತ್ತಿದ್ದ ರಸ್ತೆಗಳು ಇಂದು ಕೊಂಚ ವಿರಾಮ ಪಡೆದುಕೊಂಡಿವೆ. ಅಂಗಡಿ-ಮುಂಗಟ್ಟು ಹಾಗೂ ಹೋಟೆಲ್​ಗಳು ಬಹುತೇಕ ಸ್ತಬ್ಧವಾಗಿವೆ. ಸರ್ಕಾರಿ ಕಚೇರಿಗಳು ಸೇರಿದಂತೆ ಖಾಸಗಿ ಕಂಪನಿಗಳು ಬಾಗಿಲು ಮುಚ್ಚಿವೆ. ಒಟ್ಟಾರೆ ಇಡೀ ರಾಜಧಾನಿ ಸಂಪೂರ್ಣ ಬಂದ್​ ಆಗಿದೆ.

ಇನ್ನುಳಿದಂತೆ ಚಾಮರಾಜನಗರ ಗಡಿ ಜಿಲ್ಲೆಯಿಂದ ಮೈಸೂರು, ಹಾಸನ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಳ್ಳಾರಿ, ವಿಜಯಪುರ, ಕೊಪ್ಪಳ ಹಾಗೂ ಕಲಬುರಗಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜನರು ಜನತಾ ಕರ್ಪ್ಯೂಗೆ ಆರಂಭದಲ್ಲಿ ಒಳ್ಳೆಯ ಬೆಂಬಲ ನೀಡಿದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳ ಪ್ರಮುಖ ಕೇಂದ್ರಗಳಲ್ಲಿ ಜನರ ಓಡಾಟ ವಿರಳವಾಗಿದೆ.

ಪೆಟ್ರೋಲ್​ ಬಂಕ್​ಗಳು ಕೂಡ ಜನತಾ ಕರ್ಪ್ಯೂಗೆ ಬೆಂಬಲ ನೀಡಿರುವುದರಿಂದ ರಸ್ತೆಗೆ ಇಳಿಯುವ ವಾಹನ ಸಂಖ್ಯೆ ತುಂಬಾ ವಿರಳವಾಗಿವೆ. ಸಿನಿಮಾ ಚಟುವಟಿಕೆಗಳು ಕೂಡ ವಿರಾಮ ಪಡೆದುಕೊಂಡಿವೆ. ಪ್ರಮುಖ ಪ್ರವಾಸ ಕೇಂದ್ರಗಳಿಗೆ ಬೀಗ ಜಡಿಯಲಾಗಿದೆ. ದೇವಸ್ಥಾನಗಳು ಕೂಡ ಬಾಗಿಲು ಮುಚ್ಚಿವೆ. ಹೀಗಾಗಿ ಪ್ರಧಾನಿ ಕರೆ ಓಗೊಟ್ಟಿರುವ ಸಾರ್ವಜನಿಕರು ಮನೆಯಲ್ಲಿ ಉಳಿಯುವ ಮೂಲಕ ಕರೊನಾ ವೈರಸ್​ ವಿರುದ್ಧ ಯುದ್ಧ ಸಾರಿದ್ದಾರೆ.

ಇಡೀ ವಿಶ್ವದಲ್ಲಿ ಕರೊನಾ ವೈರಸ್​ ಸೋಂಕಿತರಿಗೆ ಹಗಲಿರುಳೆನ್ನದೇ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟುವಂತೆಯೂ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಆರೋಗ್ಯವೇ ಭಾಗ್ಯ ಅನ್ನೋ ಮಾತಿನಂತೆ ಪ್ರಧಾನಿ ಕಳಕಳಿಗೆ ಜನರು ಕೈಜೋಡಿಸಿರುವುದು ನಿಜಕ್ಕೂ ಶ್ಲಾಘನೀಯ.